

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ದೇವಸ್ಥಾನಗಳಲ್ಲಿ ಸೋಮವಾರ ಮರಕ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದರೆ, ರೈತರು ಸಡಗರದಿಂದ ಜಾನುವಾರುಗಳನ್ನು ತೊಳೆದು, ಸಿಂಗರಿಸಿ ಕಿಚ್ಚು ಹಾಯಿಸಿ ಸಂಭ್ರಮಿಸಿದರು.
ಪಟ್ಟಣದ ಮೂಲೇ ಗಣೇಶ, ಸಾರಂಗಪಾಣಿ, ಗಂಗಾಧರೇಶ್ವರ, ಮಹದೇಶ್ವರ, ಮಾರೇಹಳ್ಳಿ ಲಕ್ಷ್ಮೀ ನರಸಿಂಹಸ್ವಾಮಿ, ತೆಂಕಹಳ್ಳಿ ಶನೈಶ್ಚರ, ಬೆಳಕವಾಡಿ ಕಾಶಿವಿಶ್ವನಾಥ, ಪೂರಿಗಾಲಿ ಪಾತಾಳೇಶ್ವರ, ಮತ್ತಿತಾಳೇಶ್ವರ ಸೇರಿದಂತೆ ವಿವಿಧ ದೇಗುಲಗಳನ್ನು ವಿಶೇಷ ಪೂಜೆ, ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು.
ದೇವಾಲಯಗಳಿಗೆ ತೆರಳಿದ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಪರಸ್ಪರ ಎಳ್ಳು, ಬೆಲ್ಲ ಹಂಚಿ ಸಂಕ್ರಾಂತಿ ಸಂಭ್ರಮಿಸಿದರು.
ಗ್ರಾಮೀಣ ಭಾಗದಲ್ಲಿ ರೈತರು ಹೊಲ ಗದ್ದೆಗಳಲ್ಲಿ ತಾವು ಬೆಳೆದ ಬೆಳೆಗೆ ರಾಶಿ ಪೂಜೆ ಸಲ್ಲಿಸಿದರು. ಹಲವು ಗ್ರಾಮಗಳಲ್ಲಿ ಜೋಡೆತ್ತು ಮತ್ತು ಹಸುಗಳನ್ನು ಮಂಗಳವಾದ್ಯದೊಡನೆ ಮೆರವಣಿಗೆ ಮಾಡಿದರು. ಕಿಚ್ಚಾಯಿಸುವ ಸಂದರ್ಭದಲ್ಲಿ ಸಣ್ಣಪುಟ್ಟ ಅವಘಡಗಳನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.
ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಭಾನುವಾರ ಶುಭದಿನವೆಂದು ರಾಸುಗಳನ್ನು ಕಿಚ್ಚು ಹಾಯಿಸಿ, ಸಂಕ್ರಾಂತಿ ಹಬ್ಬ ಆಚರಿಸಿದರು. ತಳಗವಾದಿಯಲ್ಲಿ ಗ್ರಾಮಸ್ಥರು ಹಾಗೂ ಸರ್ಕಾರಿ ಶಾಲೆಯ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೈತರ ಕೃಷಿಗೆ ಬಳಸುತ್ತಿದ್ದ ಉಪಕರಣಗಳು ಹಾಗೂ ದವಸ ಧಾನ್ಯಗಳನ್ನು ಅಳತೆ ಮಾಡುತ್ತಿದ್ದ ಸೇರು, ಕೊಳಗ ಮತ್ತು ಇತರೆ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.