

ಮಡಿಕೇರಿ
ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಬೆಳೆಯಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಕುಶಾಲನಗರ ತಾಲೂಕು ಕೂಡಿಗೆ ಕ್ರೀಡಾ ಶಾಲೆ ಮೈದಾನದಲ್ಲಿ ನಡೆಯುತ್ತಿರುವ ೧೭ರ ವಯೋಮಿತಿಯ ೬೭ನೇ ಬಾಲಕಿಯರ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿ ಉದ್ಘಾಟಿಸಿ ಬುಧವಾರ ಸಂಜೆ ಮಾತನಾಡಿದರು.
ದೇಶದ ಹಾಕಿ ಕ್ರೀಡೆಗೆ ಕೊಡಗಿನ ಕೊಡುಗೆ ದೊಡ್ಡದು. ಹಾಕಿ ಇಲ್ಲಿನವರಿಗೆ ರಕ್ತಗತವಾಗಿ ಬಂದಿದೆ. ಅನೇಕ ಖ್ಯಾತನಾಮರು ರಾಷ್ಟ್ರೀಯ ಹಾಕಿ ತಂಡದಲ್ಲಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ಆರೋಗ್ಯ, ದೇಹದ ಸದೃಢತೆ ಕ್ರೀಡೆ ಸಹಕಾರಿ. ಸೋಲು, ಗೆಲುವು ಸಹಜ. ಕ್ರೀಡಾ ಸ್ಫೂರ್ತಿಯಿಂದ ಎಲ್ಲವನ್ನೂ ಸ್ವೀಕರಿಸಬೇಕು. ಕೊಡಗಿನಲ್ಲಿ ಪ್ರತಿನಿತ್ಯ ವಿವಿಧ ಕ್ರೀಡಾಕೂಟ ನಡೆಯುತ್ತಿರುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಸದಾ ಪ್ರೋತ್ಸಾಹ ಕೊಡುತ್ತದೆ ಎಂದರು.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ರಾಷ್ಟ್ರೀಯ ಕ್ರೀಡೆ ಹಾಕಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಕರ್ತವ್ಯ. ಹಾಕಿ ಮತ್ತು ಆತಿಥ್ಯಕ್ಕೆ ಹೆಸರಾಗಿರುವ ಕೊಡಗಿನಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಪಂದ್ಯಾವಳಿ ಆಯೋಜಿಸಿ ಎಲ್ಲರೂ ಭಾಗವಹಿಸುವಂತಾದಾಗ ಕ್ರೀಡೆಗೆ ಜಯ ಸಿಗುತ್ತದೆ. ರಾಜ್ಯ ಸರ್ಕಾರ ಈ ಕ್ರೀಡಾಕೂಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಹೆಚ್ಚಿನ ವೀಕ್ಷಕರು ಬಂದಾಗ ಆಟಗಾರರಿಗೆ ಆಡಲು ಉತ್ಸಾಹ ಇರುತ್ತದೆ. ಈ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ಅಗತ್ಯವಿದೆ. ಹಾಕಿ ತಂಡದವರೆಲ್ಲಾ
ಸೇರಿಕೊಂಡು ಆಡುವ ಆಟ. ತಂಡ ಸ್ಫೂರ್ತಿಯಿಂದ ಆಡಿದಲ್ಲಿ ಗೆಲುವು ಸಾಧ್ಯ. ಆಟಗಾರರಿಗೆ ಯಾವುದೇ ಸಮಸ್ಯೆ ಆಗದಂತೆ ಸಂಘಟಕರು ವ್ಯವಸ್ಥೆ ಮಾಡಬೇಕು. ಆಟವಾಡುವುದರ ಜತೆಗೆ ಹೊರ ರಾಜ್ಯದ ಕ್ರೀಡಾಪಟುಗಳು ಜಿಲ್ಲೆಯ ಪ್ರಾಕೃತಿಕ ಸೌಂದರ್ಯ ಅನುಭವಿಸುವಂತಾಗಲಿ ಎಂದು ಆಶಿಸಿದರು.
ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಕೂಡಿಗೆ ಗ್ರಾ.ಪಂ ಅಧ್ಯಕ್ಷ ಗಿರೀಶ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ವರ್ಣಿತ್ ನೇಗಿ, ಎಸ್.ಪಿ. ಕೆ. ರಾಮರಾಜನ್, ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ನಿರ್ದೇಶಕ ಬಿ.ಎಸ್. ರಘುವೀರ್, ದೈಹಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಸಹನಿರ್ದೇಶಕ ಎಸ್.ಎನ್. ರಮೇಶ್, ಶಿಕ್ಷಣ ಇಲಾಖೆ ಮೈಸೂರು ವಿಭಾಗೀಯ ಕಾರ್ಯದರ್ಶಿಪಾಂಡುರಂಗ, ಡಿಡಿಪಿಐ ಎಂ. ಚಂದ್ರಕಾಂತ್ ಆಚಾರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಮತ್ತಿತರರು ವೇದಿಕೆಯಲ್ಲಿ ಇದ್ದರು.