ಸಮಸ್ಯೆ ಪರಿಹರಿಸಲು ಆವಿಷ್ಕಾರಕ್ಕೆ ಮುಂದಾಗಿ: ಆರ್​ಆರ್ ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್​ನಲ್ಲಿ ತರಬೇತಿಯಲ್ಲಿ ಐಐಸಿ ರಾಷ್ಟ್ರೀಯ ಸಂಯೋಜಕ ಸಲಹೆ

ಅಅಅಅಅಅಅಅಅಅಅಅಅಅಅಅಅಅಅಅಅಅಅ
Published on

ಬೆಂಗಳೂರು: ವ್ಯಾಸಂಗದ ವೇಳೆ ಸಿಗುವ ಉತ್ತಮ ಅವಕಾಶಗಳನ್ನು ಉಪಯೋಗಿಸಿ ಕೊಂಡು ಸಮಾಜದಲ್ಲಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತಹ ಹೊಸ ಆವಿಷ್ಕಾರಗಳಿಗೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಇನ್​ಸ್ಟಿಟ್ಯೂಷನ್ ಇನೋವೇಷನ್ ಕೌನ್ಸಿಲ್ (ಐಐಸಿ) ರಾಷ್ಟ್ರೀಯ ಸಂಯೋಜಕ ದೀಪನ್ ಕುಮಾರ್ ಸಾಹು ಹೇಳಿದ್ದಾರೆ. ರಾಜರಾಜೇಶ್ವರಿ ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್ಸ್ ಬುಧವಾರ ಆಯೋಜಿಸಿದ್ದ ಇನೋವೇಷನ್ ಅಂಬಾಸಿಡರ್ ಟ್ರೇನಿಂಗ್ ಪ್ರೋಗ್ರಾಂಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ಭಾರತೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಶಾಖೆ (ಎಂಎಚ್​ಆರ್​ಡಿ) ‘ಐಐಸಿ’ ರಚನೆ ಮಾಡಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ 4 ಬಾರಿ ತರಬೇತಿ ಕಾರ್ಯಗಾರ ನಡೆಸಿದ್ದೇವೆ ಎಂದರು.

ವಿದ್ಯಾರ್ಥಿಗಳನ್ನು ಸ್ವಯಂ ಉದ್ಯೋಗಿಗಳಾಗಿ ರೂಪಿಸಲು ಸೂಕ್ತ ಸಲಹೆಗಾರರ ಅವಶ್ಯಕತೆ ಇರುತ್ತದೆ. ಸಲಹೆಗಾರರ ಕೊರತೆ ನೀಗಿಸಲು ಬೋಧಕರ ವರ್ಗದವರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡಬೇಕು. ಆ ಮೂಲಕ ಸಮಾಜದಲ್ಲಿರುವ ಸಮಸ್ಯೆಗಳಿಗೆ ಹೊಸ ತಂತ್ರಜ್ಞಾನದ ಮೂಲಕ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು.

ರಾಜರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಸಿ.ಎಸ್. ಅರುಣ್ ಕುಮಾರ್, ವಿಜ್ಞಾನಿ ಬಿ. ಸಂಪತ್ ರಾವ್, ಎಸಿಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್​ನ ಪ್ರಾಂಶುಪಾಲ ಡಾ.ಎಂ.ಎಸ್. ಮುರಳಿ, ಎಂಐಸಿ ಇನೋವೇಷನ್ ಅಧಿಕಾರಿ ಪಂಕಜ್ ಪಾಂಡೆ ಇತರರಿದ್ದರು.

ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ: ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಶಿಕ್ಷಣವನ್ನು ನೀಡುತ್ತಿದೆ. ಉತ್ಕೃಷ್ಟ ಕೇಂದ್ರಗಳನ್ನು ತೆರೆಯುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈ ರೀತಿಯ ಉತ್ತಮ ತರಬೇತಿ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ರಾಜರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯಕಾರಿ ನಿರ್ದೇಶಕ ಡಾ.ಎಸ್. ವಿಜಯಾನಂದ ಹೇಳಿದರು.

6 ಸಾವಿರ ಬೋಧಕ ವರ್ಗದವರಿಗೆ ತರಬೇತಿ ನೀಡುವ ಉದ್ದೇಶವನ್ನು ಐಐಸಿ ಹೊಂದಿದೆ. ಉತ್ತಮ ಪ್ರಾಜೆಕ್ಟ್​ಗಳನ್ನು ರೂಪಿಸಿದ ಕಾಲೇಜುಗಳಿಗೆ ರ‍್ಯಾಂಕಿಂಗ್ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಆಯೋಜನೆ ಮಾಡುವ ಆಲೋಚನೆ ಇದೆ. ಇಲ್ಲಿಯೂ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ. | ದೀಪನ್ ಕುಮಾರ್ ಸಾಹು, ಐಐಸಿ ರಾಷ್ಟ್ರೀಯ ಸಂಯೋಜಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net