ಬೆಳೆಗೆ ರೋಗ ಪರಿಹಾರ ಕಾರ್ಯಕ್ಕೆ ಮುಂದಾಗಿ

1mul1 PARISHILANE
Published on

ಮುಳಗುಂದ: ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಬೆಳೆಗಳು ಸಮೃದ್ಧವಾಗಿದ್ದು, ಅವುಗಳಲ್ಲಿ ಕಂಡು ಬರುವ ರೋಗ ಬಾಧೆ ಪರಿಹಾರ ಕಾರ್ಯಕ್ಕೆ ಹಂತ ಹಂತವಾಗಿ ರೈತರು ಮುಂದಾಗಬೇಕು ಎಂದು ಹುಲಕೋಟಿ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ರಾಜೇಶ್ವರಿ ಚಿನಿವಾಲರ ಹೇಳಿದರು.

ಪಟ್ಟಣದಲ್ಲಿ ಕೃಷಿ ಮಾಹಾವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳ ತಂಡ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಮುಂಗಾರು ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದಿದ್ದು, ತೇವಾಂಶ ಹೆಚ್ಚಾಗಿ ಹೆಸರು ಬೆಳೆಯಲ್ಲಿ ಅಲ್ಲಲ್ಲಿ ಕಾಂಡ ಕೊರಕ ಕೀಟದ ಬಾಧೆ ಕಂಡು ಬಂದಿದೆ. ಈ ಬಾಧೆಯಿಂದ ಬೆಳೆಗೆ ಪೋಷಕಾಂಶಗಳ ಪೂರೈಕೆ ಕಡಿಮೆಯಾಗಿ ಬೆಳೆ ಹಳದಿಯಾಗಲು ಕಾರಣವಾಗಿದೆ. ಕಟಾವಿಗೆ ಬಂದ ಬೆಳೆಗಳಿಗೆ ಕೀಟ ನಾಶಕ ಸಿಂಪರಣೆ ಅವಶ್ಯಕತೆ ಇರುವುದಿಲ್ಲ, ಹೂವಿನ ಹಂತದಲ್ಲಿರುವ ಬೆಳೆಗಳಿಗೆ ಮಾತ್ರ ಕೀಟನಾಶಕ ಸಿಂಪರಣೆ ಮಾಡುವುದು ಸೂಕ್ತ ಎಂದರು.

ಗದಗ ಕೃಷಿ ಉಪನಿರ್ದೇಶಕ ಜಿ.ಎಸ್. ಸ್ಪೂರ್ತಿ, ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ, ಮೇಘನಾ ನಾಡಗೇರ, ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಎಂ.ಡಿ. ಪಾಟೀಲ, ಸಂಗಶೆಟ್ಟಿ ಬಾಲ್ಕೊಂಡೆ, ಮುಳಗುಂದ ರೈತ ಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ, ಸೈಯದಲಿ ಶೇಖ್, ಮುತ್ತಣ್ಣ ಬಳ್ಳಾರಿ, ಕಿರಣ ಕುಲಕರ್ಣಿ, ದೇವಪ್ಪ ಅಣ್ಣಿಗೇರಿ, ಬಸವರಾಜ ಕರಿಗಾರ, ಮಹಾಂತೇಶ ಲಾಳಿ, ದತ್ತಣ್ಣ ಯಳವತ್ತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net