ವೈದ್ಯರ ಸಮಸ್ಯೆ ನೀಗಿಸಲು ಮುಂದಾಗಿ

27skpp1
Published on

ಸಕಲೇಶಪುರ: ವೈದ್ಯರ ಕೊರತೆ ಕೇವಲ ತಾಲೂಕಿನ ಸಮಸ್ಯೆಯಲ್ಲ. ರಾಜ್ಯದ ಸಮಸ್ಯೆಯಾಗಿದ್ದು ಸರ್ಕಾರ ಕೂಡಲೇ ವೈದ್ಯರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕೆಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಮಿನಿವಿಧಾನ ಸೌಧದ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜನಸ್ಪಂದನ ಹಾಗೂ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಸಿಬ್ಬಂದಿ ಮೊದಲು ಗೌರವ ಕೊಡುವುದನ್ನು ಕಲಿಯಬೇಕು. ಸಾರ್ವಜನಿಕರಿಗೆ ಗೌರವ ಕೊಟ್ಟರೆ ಯಾವ ಸಾರ್ವಜನಿಕರು ಸರ್ಕಾರಿ ನೌಕರರ ಮೇಲೆ ಮುಗಿ ಬೀಳುವುದಿಲ್ಲ. ಸರ್ಕಾರಿ ಸಿಬ್ಬಂದಿ ಕೆಲಸ ಮಾಡವಾಗ ಸಾಮಾನ್ಯ ಜ್ಞಾನ ಉಪಯೋಗಿಸಬೇಕಾಗಿದೆ. ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು ಕಾಲ ಮಿತಿಯೊಳಗೆ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಆದ್ಯತೆ ನೀಡಬೇಕಾಗಿದೆ. ಇಂತಹ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಸಹ ಆಯೋಜಿಸಲಾಗುವುದು ಎಂದರು.

ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ, ತಾಲೂಕಿನಲ್ಲಿ ಅತಿ ಹೆಚ್ಚು ಸಮಸ್ಯೆಗಳು ಕಂದಾಯ ಇಲಾಖೆಯ ಭೂ ಸಮಸ್ಯೆಗಳಿಗೆ ಸಂಭಂದಿಸಿದ್ದು, ಪಹಣಿಯಲ್ಲಿ ಕಂಡುಬರುವ ಸಣ್ಣ ಪುಟ್ಟ ತಿದ್ದುಪಡಿಗಳನ್ನು ಆದಷ್ಟು ಬೇಗ ಸರಿಪಡಿಸಲಾಗುವುದು. ತಾಲೂಕಿನಲ್ಲಿ ಸಮಾರು 219 ಪಹಣಿಗೆ ಸಂಬಂಧಿಸಿದ ದೋಷಗಳಿದ್ದು ಎರಡು ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಪಿಂಚಣಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಣೆ ಮಾಡಲು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಹಾಕಲಾಗುತ್ತಿದೆ. ಕಾಫಿ ತೋಟಗಳ ಎಸ್ಟೇಟ್‌ನಲ್ಲಿ ಹೊರ ರಾಜ್ಯಗಳಿಂದ ಬರುವ ಕೂಲಿ ಕಾರ್ಮಿಕರ ಸಂಪೂರ್ಣ ವಿವರವನ್ನು ಪಡೆದು ತಮ್ಮ ಎಸ್ಟೇಟ್‌ನಲ್ಲಿ ಕೂಲಿ ಮಾಡುವ ಕಾರ್ಮಿಕರಿಗೆ ಸರಿಯಾದ ವೇತನವನ್ನು ನೀಡಬೇಕು. ಗರ್ಭಿಣಿಯರಿದ್ದರೆ ಆಶಾ ಕಾರ್ಯಕರ್ತರ ಮೂಲಕ ಆಸ್ಪತ್ರೆಗೆ ದಾಖಲು ಮಾಡಬೇಕು ಎಂದರು.

ಸಭೆಯಲ್ಲಿ ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ನಿವೇಶನ ವಿತರಣೆಗೆ ಸಂಬಂಧಿಸಿದಂತೆ ಇದುವರೆಗೆ ತಾಲೂಕಿನಲ್ಲಿ ಸುಮಾರು 13,720 ಅರ್ಜಿಗಳು ಬಂದಿದ್ದು ಅವುಗಳಲ್ಲಿ 5,220 ಅರ್ಜಿಗಳನ್ನು ಪರಿಶೀಲಿಸಿದ್ದು ಕೂಡಲೇ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.
ಜನಸ್ಪಂದನ ಕಾರ್ಯಕ್ರಮದಲ್ಲಿ 136 ಅರ್ಜಿಗಳು ಬಂದವು. ಸುಮಾರು 3 ಗಂಟೆಗೂ ಹೆಚ್ಚಿನ ಕಾಲ ಕಾರ್ಯಕ್ರಮ ನಡೆಯಿತು. ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.

ಡಿವೈಎಸ್‌ಪಿ ಗೋಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್, ತಾಪಂ ಸದಸ್ಯ ಯಡೆಹಳ್ಳಿ ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಮಹೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜನಾರ್ದನ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net