ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಮುಂದು

Santosh Lad
ಸಂತೋಷ ಲಾಡ್.
Published on

ಹುಬ್ಬಳ್ಳಿ: ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುವ ಮಾತು ಕೊಟ್ಟಿತ್ತು. ನಮ್ಮ ರಾಜ್ಯದಲ್ಲಿ ಅಕ್ಕಿ ಕಾರ್ಯಕ್ರಮ ಯಶಸ್ವಿ ಆಗಬಾರದು ಎಂದು ಮಾತು ಹಿಂಪಡೆದಿದೆ. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೊಟ್ಟ ಸಮಯದಲ್ಲೇ ಗ್ಯಾರಂಟಿಗಳನ್ನು ಕೊಡುತ್ತೇವೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಸಂಪೂರ್ಣ ಮಾಹಿತಿ ಕೊಡಲಿದ್ದಾರೆ. ಕಳೆದ ಬಾರಿ ಬಿಜೆಪಿಯವರು ಪ್ರಣಾಳಿಕೆ ಸಿದ್ಧಪಡಿಸಿದ್ದರು. ಕೇಂದ್ರ ಸರ್ಕಾರವನ್ನು ಕೇಳಿಕೊಂಡು ಪ್ರಣಾಳಿಕೆ ನೀಡಿದ್ರಾ? ಎಂದು ಲಾಡ್ ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರ ನಮ್ಮ ಗ್ಯಾರಂಟಿ ಯೋಜನೆಗಳಿಗೆ ಅಡ್ಡಿಪಡಿಸುತ್ತಿದೆ. ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶದ ಜನತೆ ಕೇಂದ್ರ ಚಲನ ವಲನ ಗಮನಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡದೇ ಇರುವುದನ್ನು ಪಶ್ನಿಸಿ ಕಾಂಗ್ರೆಸ್ ಕಾರ್ಯಕರ್ತರು ಜೂ. 20ರಂದು ಪ್ರತಿಭಟನೆ ಮಾಡಲಿದ್ದಾರೆ ಎಂದರು.

ಕಾಂಗ್ರೆಸ್ ಬಾವುಟ ದಿಟ: ಹು-ಧಾ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ನಡೆದಿದೆ. ನಮ್ಮ ಕಡೆ ಬಹಳಷ್ಟು ಸದಸ್ಯರು ಒಲವು ತೋರುತ್ತಿದ್ದಾರೆ. ಪಕ್ಷೇತರ ಹಾಗೂ ಬಿಜೆಪಿಯ ಕೆಲ ಸದಸ್ಯರಲ್ಲಿ ಅಸಮಾಧಾನವಿದೆ. ನಮ್ಮ ಪಕ್ಷ ಸೇರಲು ಕೆಲವರು ಮಾತನಾಡುತ್ತಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್, ವಿನಯ ಕುಲಕರ್ಣಿ ಮತ್ತು ಸ್ಥಳೀಯ ನಾಯಕರ ಜತೆಗೆ ಚರ್ಚೆ ಮಾಡುತ್ತಿದ್ದಾರೆ. ಪಾಲಿಕೆಯಲ್ಲಿ ಈ ಬಾರಿ ಕಾಂಗ್ರೆಸ್ ಬಾವುಟ ಹಾರುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ. ಹಾಗಾಗಿ ಅವರು ರೆಸಾರ್ಟ್​ಗೆ ಹೋಗಿದ್ದಾರೆ. ನಾವು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದೇವೆ. ನಾವು ನಮ್ಮ ಸದಸ್ಯರೊಂದಿಗೆ ಸಭೆ ಮಾಡಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net