

ಹಾಸನ: ಮಧ್ಯಾಹ್ನದ ಬಿಸಿಯೂಟ ನೀಡುವ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಅಡುಗೆ ಕೋಣೆಗಳ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ. ಪರಮೇಶ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಕ್ಷರ ದಾಸೋಹದ ಜಿಲ್ಲಾ ಮಟ್ಟದ ದ್ವಿತೀಯ ಚಾಲನಾ ಮತ್ತು ಪರಾಮರ್ಶನಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಂದ ಯೋಜನೆ ಪ್ರಗತಿ ಕುರಿತು ಮಾಹಿತಿ ಪಡೆದು ಮಾತನಾಡಿದರು.
ಅಡುಗೆ ಕೋಣೆಯ ಸ್ವಚ್ಛತೆ, ಅಡುಗೆ ತಯಾರಿಸುವವರ ಆರೋಗ್ಯ ಪಾಲನೆ, ಸುರಕ್ಷತಾ ವಿಮೆ, ಅಡುಗೆ ಗ್ಯಾಸ್‌ನ ಬಳಕೆ ಕುರಿತು ತಾಲೂಕು ಹಂತದಲ್ಲಿಯೇ ತರಬೇತಿ ನೀಡಿ ಅರಿವು ಮೂಡಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾದ್ಯಂತ 2600 ಸರ್ಕಾರಿ ಶಾಲೆಗಳಿದ್ದು, ಪ್ರಸಕ್ತ ವರ್ಷದಲ್ಲಿ 1000 ಶಾಲೆಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಿಚನ್ ಗಾರ್ಡನ್ ನಿರ್ಮಿಸಲಾಗುತ್ತಿದೆ. ಆಯಾ ಶಾಲೆ- ಕಾಲೇಜಿನ ಅಧ್ಯಾಪಕರು ಅವುಗಳನ್ನು ನಿರ್ವಹಿಸುವ ಜವಾಬ್ದಾರಿ ಹೊರಬೇಕು ಎಂದು ಸೂಚಿಸಿದರು.
ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರು ಒದಗಿಸಲು ಉತ್ತಮ ಕೊಳವೆ ಬಾವಿ ಅಥವಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಳಸಿಕೊಳ್ಳಬೇಕು. ಗ್ರಾಮ ಪಂಚಾಯಿತಿಗಳ ವತಿಯಿಂದ ಶಾಲೆ ಮತ್ತು ಅಂಗನವಾಡಿಗಳಿಗೆ ನೀರು ಶುದ್ಧೀಕರಿಸುವ ಸೌಲಭ್ಯ ಕಲ್ಪಿಸುವಂತೆ ಅವರು ನಿರ್ದೇಶನ ನೀಡಿದರು.
ಶಾಲೆಗಳಲ್ಲಿ ಬಿಸಿಯೂಟಕ್ಕಾಗಿ ಬಳಸಿ ಉಳಿಯುವ ಆಹಾರ ಪದಾರ್ಥಗಳ ಪ್ರಮಾಣ ಕುರಿತು ತಿಂಗಳ ಕೊನೆಯಲ್ಲಿ ಶಾಲಾವಾರು ವರದಿ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ಶಾಲೆಗಳಲ್ಲಿ ತಯಾರಿಸುವ ಬಿಸಿಯೂಟವನ್ನು ಶಿಕ್ಷಕರು ಕಡ್ಡಾಯವಾಗಿ ಪರಿಶೀಲಿಸಬೇಕು ಮತ್ತು ವಿದ್ಯಾರ್ಥಿಗಳ ಪಾಲಕರೂ ಬಿಸಿಯೂಟ ಸೇವನೆ ಮಾಡಿ ಗುಣಮಟ್ಟ ಪರಿಶೀಲಿಸಿ ತಮ್ಮ ಅಭಿಪ್ರಾಯವನ್ನು ದಾಖಲಿಸಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ಆಹಾರ ತಯಾರಿಸಲು ಬಳಸುವ ಅಡುಗೆ ಎಣ್ಣೆ ಮತ್ತು ಹಳೆಯ ಗ್ಯಾಸ್ ಒಲೆಗಳನ್ನು ಬದಲಾಯಿಸುವಂತೆ ಪ್ರಸ್ತಾವನೆ ಇದೆ. ಆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರತಿ 3 ತಿಂಗಳಿಗೊಮ್ಮೆ ಗ್ಯಾಸ್ ಒಲೆಗಳ ಕಾರ್ಯಕ್ಷಮತೆಯನ್ನು ತಪಾಸಣೆ ಮಾಡಿಸಬೇಕು. ಆ ಕುರಿತು ಎಲ್ಲ ಮುಖ್ಯೋಪಾಧ್ಯಾಯರು ಗಮನಹರಿಸಬೇಕು ಎಂದರು.
ಸುರಕ್ಷತೆ ದೃಷ್ಟಿಯಿಂದ ಬಳಕೆಗೆ ಯೋಗ್ಯವಾಗಿಲ್ಲದ ಗ್ಯಾಸ್ ಒಲೆಗಳನ್ನು ಮತ್ತು ಅಡುಗೆ ಪಾತ್ರೆಗಳನ್ನು ಪಟ್ಟಿ ಮಾಡಿ ಹೊಸದಾಗಿ ಖರೀದಿಸಲು ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ತಿಂಗಳು ಅಂಗನವಾಡಿ ಮತ್ತು ಶಾಲಾ ಮಕ್ಕಳ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ನಡೆಸಬೇಕು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ದಾಸ್ತಾನು ಮಾಡಿ ಮತ್ತು ಗುಣಮಟ್ಟ ಕಳೆದುಕೊಳ್ಳುವ ಮೊದಲೇಬಳಕೆ ಮಾಡಬೇಕು ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸವಿತಾ, ಜಿಲ್ಲಾ ಪಂಚಾಯಿತಿ ಅಕ್ಷರ ದಾಸೋಹ ಅಧಿಕಾರಿ ಲತಾ, ಜಿಲ್ಲಾ ಡಯಟ್‌ನ ಉಪನಿರ್ದೇಶಕ ಪುಟ್ಟರಾಜು, ಆರೋಗ್ಯ ಸುರಕ್ಷತಾ ಪ್ರಾಧಿಕಾರದ ಪ್ರಭಾರ ಅಂಕಿತ ಅಧಿಕಾರಿ ಡಾ.ಹಿರಣ್ಣಯ್ಯ, ಸಾರ್ವಜನಿಕ ಸಂಪರ್ಕ ಇಲಾಖೆಯ ಪರಿವೀಕ್ಷಕ ಕಾಂತರಾಜು, ಜಿಲ್ಲೆಯ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಜರಿದ್ದರು.