ಅಮಾನಿಕೆರೆಯಲ್ಲಿ ಅಂತರಗಂಗೆ ನಿಯಂತ್ರಣಕ್ಕೆ ಕ್ರಮ: ಶಾಸಕ ಜಿ.ಬಿ.ಜ್ಯೋತಿಗಣೇಶ್

19Tmk_Amanikere_GBJ
Published on

ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಅಮಾನಿಕೆರೆಯಲ್ಲಿ ಅಂತರಗಂಗೆ ಬೆಳೆದಿರುವುದು ಕಳವಳ ಮೂಡಿಸಿದೆ. ಶಾಶ್ವತವಾಗಿ ಅಂತರಗಂಗೆ ನಿಯಂತ್ರಿಸಲು ಕ್ರಮವಹಿಸಲಾಗುವುದು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಅಮಾನಿಕೆರೆಗೆ ಮಂಗಳವಾರ ಸಂಜೆ ಭೇಟಿ ನೀಡಿದ್ದ ಜ್ಯೋತಿಗಣೇಶ್, ಅಮಾನಿಕೆರೆ ಹೇಮೆ ನೀರು ಹರಿಸಿ ತುಂಬಿಸಿರುವುದರಿಂದ ನಗರದ ಜನತೆ ಸಂತಸಗೊಂಡಿದ್ದಾರೆ. ಆದರೆ, ಅಮಾನಿಕೆರೆಯಲ್ಲಿ ಬೆಳೆದಿರುವ ಅಂತರಗಂಗೆ(ಜಲಕಳೆ) ದೊಡ್ಡಸಮಸ್ಯೆಯಾಗಿ ಪರಿಣಮಿಸಿದೆ. ಅಮಾನಿಕೆರೆಯಲ್ಲಿ ಪಕ್ಷಿಧಾಮವನ್ನು ನಿರ್ಮಾಣ ಮಾಡುವುದರ ಜತೆಗೆ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸಲು ಯೋಜನೆ ರೂಪಿಸಿದ್ದು ಇದಕ್ಕೆ ಅಂತರಗಂಗೆ ತೊಡಕಾಗಲಿದೆ ಎಂದರು.

ಅಂತರಗಂಗೆ ತೆರವುಗೊಳಿಸಲು ಹೈದರಾಬಾದ್‌ನ ತಜ್ಞರು ತಯಾರಿಸಿರುವ ಯಂತ್ರೋಪಕರಣಗಳು ಸಹಕಾರಿಯಾಗಲಿದೆ ಎಂದು ತಜ್ಞರು ಸಲಹೆ ನೀಡಿದ್ದು ಅವರ ಅಭಿಪ್ರಾಯದಂತೆ ಶಾಶ್ವತವಾಗಿ ಅಂತರಗಂಗೆಯನ್ನು ನಿಯಂತ್ರಿಸುವ ದೃಷ್ಟಿಯಲ್ಲಿ ಯೋಜನೆಗಳನ್ನು ರೂಪಿಸಲಾಗುವುದು. ಅಂತರಗಂಗೆಯನ್ನು ಶಾಶ್ವತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಟೂಡಾ ವತಿಯಿಂದಲೇ ಯಂತ್ರೋಪಕರಣ ಖರೀದಿಸಲಾಗುವುದು ಎಂದು ತಿಳಿಸಿದರು.

ಯಂತ್ರೋಪಕರಣ ಖರೀದಿಸುವವರೆಗೆ ಟೂಡಾ ಹಾಗೂ ಮೀನುಗಾರಿಕೆ ಇಲಾಖೆ ವತಿಯಿಂದ ಬೋಟ್ ಮೂಲಕ ಹೈದರಾಬಾದ್‌ನ ಮುಳುಗು ತಜ್ಞರಿಂದ ಅಂತರಗಂಗೆಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಅಂತರಗಂಗೆಯನ್ನು ತೆರವುಗೊಳಿಸದೇ ಹೋದರೆ ಕೆರೆ ತುಂಬ ಹರಡಿಕೊಳ್ಳಲಿದೆ ಎಂದು ತಿಳಿಸಿದರು. ವನ್ಯ ಜೀವಿ ತಜ್ಞ ಟಿ.ವಿ.ಎನ್.ಮೂರ್ತಿ, ಟೂಡಾ ಆಯುಕ್ತ ಯೋಗಾನಂದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net