ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ

SIRSI 1
Published on

ಶಿರಸಿ: ಜಿಲ್ಲೆಯ ಪಿಯುಸಿ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಈ ಕುರಿತಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾತನಾಡಿ ಹುದ್ದೆಗಳನ್ನು ಶೀಘ್ರ ತುಂಬಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಪಿಯುಸಿ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಸಮೀಪದಲ್ಲಿಯೇ ಹಿಂದಿನ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಒಳಾಂಗಣ ಕ್ರೀಡಾಂಗಣವನ್ನು ಮಂಜೂರು ಮಾಡಿಸಿದ್ದಾರೆ. ಈ ಕ್ರೀಡಾಂಗಣ ಕಾಮಗಾರಿ ಸಹ ಈಗ ಮುಕ್ತಾಯದ ಹಂತದಲ್ಲಿದೆ. ಈ ಕ್ರೀಡಾಂಗಣಕ್ಕೆ ಸುಸಜ್ಜಿತ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಕ್ರೀಡಾಕೂಟಗಳು ಮಳೆಯಲ್ಲಿ ನಡೆದು ಸಾರ್ವಜನಿಕರು, ಕ್ರೀಡಾಪಟುಗಳು ಸಮಸ್ಯೆ ಎದುರಿಸುವುದನ್ನು ತಪ್ಪಿಸುವ ಸಲುವಾಗಿ ಮುಂದಿನ ಕ್ರೀಡಾಕೂಟಗಳು ಒಳಾಂಗಣದಲ್ಲಿಯೇ ನಡೆಸುವಂತೆ ವ್ಯವಸ್ಥೆ ರೂಪಿಸಲಿದ್ದೇವೆ ಎಂದರು.

ಕ್ರೀಡೆ ಯಾರೊಬ್ಬರ ಸ್ವತ್ತಲ್ಲ. ಪ್ರತಿಯೊಬ್ಬರೂ ಈ ಕ್ಷೇತ್ರದಲ್ಲಿ ಸಾಧನೆ ಮಾಡಬಹುದಾಗಿದೆ. ಪ್ರತಿ ವಿದ್ಯಾರ್ಥಿ ಶಿಕ್ಷಣಕ್ಕೆ ಒತ್ತು ನೀಡಿದಂತೆ ಕ್ರೀಡೆಗೂ ಒತ್ತು ನೀಡಬೇಕು. ಕಲಿತ ಶಿಕ್ಷಣ ಕಾರ್ಯರೂಪಕ್ಕೆ ಬರಲು ಆರೋಗ್ಯ ಸಂಪತ್ತು ಅತ್ಯಗತ್ಯ. ಆರೋಗ್ಯ ಸಂಪತ್ತಿಗೆ ಕ್ರೀಡೆ ಅಗತ್ಯ ಎಂದರು.

ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸದಸ್ಯರಾದ ದೀಪಾ ಮಹಾಲಿಂಗಣ್ಣ, ಕುಮಾರ ಬೋರ್ಕರ್, ಖಾದರ ಆನವಟ್ಟಿ, ದೀಪಕ ದೊಡ್ಡೂರು, ಜ್ಯೋತಿ ಮುಕ್ತೇಶ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net