

ಹುಬ್ಬಳ್ಳಿ: ಕನ್ನಡಿಗರೆಲ್ಲ ಒಕ್ಕಟ್ಟಾಗುವ ಮೂಲಕ ನಾಡು, ನುಡಿಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಹಿರಿಯ ಸಂಶೋಧಕ ಡಾ. ಜೆ.ಎಂ. ನಾಗಯ್ಯ ಹೇಳಿದರು.
ಇಲ್ಲಿಯ ಲಿಂಗರಾಜ ನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಪ್ರೋಬಸ್ ಕ್ಲಬ್, ಶ್ರೀ ಕಟ್ಟಿ ಮಂಗಳಾದೇವಿ ಮಹಿಳಾ ಮಂಡಳದ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಕರ್ನಾಟಕದ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಪರಂಪರೆ ಪುರಾತನವಾದದ್ದು. ಆಲೂರು ವೆಂಕಟರಾವ್, ಮುದವಿಡು ಕೃಷ್ಣರಾಯರು, ಗಂಗಾಧರರಾವ ದೇಶಪಾಂಡೆ, ಬಿ.ಎಂ. ಶ್ರೀಕಂಠಯ್ಯ, ಜೆ.ಪಿ. ರಾಜರತ್ನಂ, ಬಿ.ಎಲ್. ರೈಸ್, ರಂಗನಾಥ ದಿವಾಕರ, ಅಂದಾನೆಪ್ಪ ದೊಡ್ಡಮೇಟಿ ಮುಂತಾದವರ ನಾಡು ನುಡಿ ಸೇವೆ ಸ್ಮರಣೀಯವಾಗಿದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಗ್ರಂಥಗಳು ಕನ್ನಡ ಭಾಷೆಯಲ್ಲಿ ರಚನೆಯಾಗಬೇಕು ಎಂದರು.
ಸಾಂಸ್ಕೃತಿಕ ಸಮದಾಯ ಭವನ ಅಧ್ಯಕ್ಷ ಡಾ. ಜಿ.ಬಿ. ಕಲಕೋಟಿ, ಶ್ರೀ ಕಟ್ಟಿ ಮಂಗಳಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ರೇಶ್ಮಾ ವಿ. ಮಾತನಾಡಿದರು.
ಮಹಾನಗರ ಪಾಲಿಕೆಯಿಂದ ಧೀಮಂತ ಪ್ರಶಸ್ತಿ ಪಡೆದ ಡಾ. ಬಿ.ಎಸ್. ಮಾಳವಾಡ ಅವರನ್ನು ಸನ್ಮಾನಿಸಲಾಯಿತು. 85 ವಸಂತಗಳನ್ನು ಪೂರೈಸಿದ ಪ್ರೋಬಸ್ ಕ್ಲಬ್ ಹಿರಿಯ ಸದಸ್ಯರಾದ ಡಾ. ಎಂ. ಈಶ್ವರ, ಬಿ. ಬಸಣ್ಣ, ಪ್ರೊ. ಎಸ್.ಎಚ್. ಚೌಡಾಪುರ, ಎಸ್.ಎಂ. ತೋಗರ್ಸಿ ಅವರನ್ನು ಗೌರವಿಸಲಾಯಿತು.
ಕ್ಲಬ್ ಅಧ್ಯಕ್ಷ ಡಾ. ಎಂ.ಜಿ. ಸಜ್ಜನರ ಅಧ್ಯಕ್ಷತೆ ವಹಿಸಿದ್ದರು. ಗಾಯಕ ರವೀಂದ್ರ ರಾಮದುರ್ಗಕರ ಭಾವಗೀತೆಗಳನ್ನು ಹಾಡಿದರು. ಉಪಾಧ್ಯ ಎಸ್.ಬಿ. ಅಂಕಲಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಬಿ.ವಿ. ಹಳೇಮನಿ ವಂದಿಸಿದರು. ಕಟ್ಟಿ ಮಂಗಳಾದೇವಿ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥಿಸಿದರು, ಎಸ್.ಎಸ್. ಕರಡಿ ಅವರು ಜನ್ಮದಿನದ ಹಾಡು ಹೇಳಿದರು. ಉಮೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.