

ಮೈಸೂರು: ಕಾಡಿನಲ್ಲಿ ಕಿರು ಉತ್ಪನ್ನ ಸಂಗ್ರಹಿಸುವುದಕ್ಕೆ ಅರಣ್ಯಾಧಿಕಾರಿಗಳು ಅವಕಾಶ ನೀಡದೆ ತೊಂದರೆ ಆಗುತ್ತಿದೆ ಎಂದು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ಅಧ್ಯಕ್ಷ ಡಿ.ಕಾವೇರ ಅಸಮಾಧಾನ ವ್ಯಕ್ತಪಡಿಸಿದರು.
ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಗರದ ಸಹಕಾರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಿರಿಜನರ ಸಹಕಾರ ಸಂಘಗಳಲ್ಲಿ (ಲ್ಯಾಂಪ್ಸ್) ಯಾವುದೇ ರಾಸಾಯನಿಕ ಪದಾರ್ಥ ಬೆರೆಸದ ನೈಸರ್ಗಿಕವಾದ 24 ಬಗೆಯ ಅರಣ್ಯ ಕಿರು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಅರಣ್ಯದಂಚಿನಲ್ಲಿರುವ ನಾವು ಸದಾ ಪ್ರಕೃತಿಯನ್ನು ಕಾಪಾಡುವವರಾಗಿದ್ದು ನೈಸರ್ಗಿಕವಾದ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಅದನ್ನು ಮಾರಾಟ ಮಾಡಿ ಸಂಘದ ಬೆಳವಣಿಗೆಗೆ ಬಳಸುತ್ತೇವೆ ಎಂದರು.
ಆದರೆ ಅರಣ್ಯ ಇಲಾಖೆಯವರು ನೈಸರ್ಗಿಕವಾದ ಕಿರು ಉತ್ಪನ್ನಗಳನ್ನು ಸಂಗ್ರಹಿಸುವುದಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ಸಂಘದ ಬೆಳವಣಿಗೆಗೆ ತೊಡಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷಾತೀತ ಹಾಗೂ ಜಾತ್ಯತೀತ ನೆಲೆಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸಹಕಾರ ರಂಗ ದೇಶದಲ್ಲಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಬೇಕಾಗಿದೆ. ಪ್ರತಿಯೊಬ್ಬರಿಗೂ ಸಹಕಾರ ಕ್ಷೇತ್ರ ಬಹಳ ಮುಖ್ಯವಾಗಿದ್ದು, ಸಹಕಾರಿ ಸಂಸ್ಥೆಗಳು ಪರಸ್ಪರ ಸಹಕರಿಸುವುದು ಸರಿಯಾದ ಮಾರ್ಗವೇ. ಆದರೆ ಸ್ವಹಿತಾಸಕ್ತಿಗಳನ್ನು ಕಾಪಾಡಿಕೊಂಡ ನಂತರವೇ ಪರಸ್ಪರ ಸಹಕಾರ ಸಾಧ್ಯ. ಆಗಾಗಿ ಮೊದಲು ಸಂಘವನ್ನು ಬಲಿಷ್ಠಪಡಿಸಬೇಕಿದೆ ಎಂದರು.
ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ (ಕೆಐಸಿಎಂ) ಉಪನ್ಯಾಸಕ ಎಸ್.ಮಹದೇವಪ್ಪ ವಿಷಯ ಮಂಡಿಸಿ ಮಾತನಾಡಿ, ಸಮಾಜದಲ್ಲಿ ಸೌಲಭ್ಯ ವಂಚಿತರಿಗೆ ಸಹಾಯ, ಸಹಕಾರ ಮಾಡುವುದೇ ಸಹಕಾರಿ ಬ್ಯಾಂಕ್‌ಗಳ ಆದ್ಯತೆಯಾಗಬೇಕು ಎಂದು ಹೇಳಿದರು.
ಲಾಭದ ಉದ್ದೇಶದಿಂದ ಸಹಕಾರಿ ವಲಯ ಹುಟ್ಟಿಕೊಳ್ಳದೆ ಸೇವಾ ಮನೋಧರ್ಮದಿಂದ ಬೆಳೆದು ಬಂದಿದೆ. ಸಹಕಾರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡ ಮತ್ತು ಮಧ್ಯಮ ವರ್ಗದವರು ಸಾಲ ಪಡೆದರೆ, ಪ್ರಾಮಾಣಿಕವಾಗಿ ಬದ್ಧತೆಯಿಂದ ಮರುಪಾವತಿ ಮಾಡುತ್ತಾರೆ. ಆದರೆ ಶ್ರೀಮಂತರು ಸಾಲ ಪಡೆದು, ಮರುಪಾವತಿ ಮಾಡುವಾಗ ವಿಳಂಬ ಧೋರಣೆ ಅನುಸರಿಸುತ್ತಾರೆ. ಹೀಗಾಗಿ ಸಹಕಾರಿ ಬ್ಯಾಂಕ್‌ಗಳು ಶ್ರೀಮಂತರ ಹೂಡಿಕೆಯಲ್ಲಿ ಬಡವರಿಗೆ ಸಾಲ ಸೌಲಭ್ಯ ಹೆಚ್ಚೆಚ್ಚು ಒದಗಿಸಬೇಕು ಎಂದರು.
ಸ್ವಾತಂತ್ರ್ಯಾನಂತರ ಭಾರತದ ಆರ್ಥಿಕ ವ್ಯವಸ್ಥೆಗೆ ಶೇ.40ರಷ್ಟು ಬೆಂಬಲವಾಗಿ ನಿಂತಿರುವುದು ಸಹಕಾರ ಕ್ಷೇತ್ರ. ಸಹಕಾರಿ ಸಂಘಗಳ ಮೂಲಕವೇ ನಮ್ಮ ಆರ್ಥಿಕ ವ್ಯವಹಾರಗಳು ನಡೆಯುತ್ತವೆ. ಮುಖ್ಯವಾಗಿ ಸಣ್ಣ ಉಳಿತಾಯದ ಬಗ್ಗೆ ಜನರಿಗೆ ಅಜ್ಞಾನವಿದೆ. ಉಳಿತಾಯ ನಮಗಾಗಿ ಹಾಗೂ ನಮ್ಮ ಸಹಕಾರ ಕ್ಷೇತ್ರಕ್ಕೆ ಉಪಯೋಗಕ್ಕೆ ಬರುತ್ತದೆ ಎಂದರು.
ಸಹಕಾರ ಕ್ಷೇತ್ರ ಆರ್ಥಿಕತೆಯ ಬೆಳವಣಿಗೆಯಲ್ಲಿ ಮತ್ತಷ್ಟು ಗಣನೀಯ ಕೊಡುಗೆ ನೀಡಲು ಸಹಕಾರ ಸಂಘಗಳ ಆರ್ಥಿಕ ಸೇರ್ಪಡೆ, ಡಿಜಿಟಲೀಕರಣ, ದತ್ತಾಂಶ ಬಲಪಡಿಸಿಕೊಂಡರೆ ಇನ್ನಷ್ಟು ಬಲಿಷ್ಠಗೊಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಉಪಾಧ್ಯಕ್ಷ ಬಿ.ಎನ್.ಸದಾನಂದ, ನಿರ್ದೇಶಕರಾದ ವೈ.ಭೈರಪ್ಪ, ಎಚ್.ಎಸ್.ಪ್ರಶಾಂತ್ ತಾತಾಚಾರ್, ಕೆಐಸಿಎಂ ಪ್ರಾಂಶುಪಾಲ ಚಂದ್ರಶೇಖರ್, ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ವಿಶ್ವೇಶ್ವರಯ್ಯ, ವ್ಯವಸ್ಥಾಪಕ ಪಿ.ಎಸ್.ಹರೀಶ್ ಇತರರು ಇದ್ದರು. ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಸಹಕಾರಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.