

ಸಮಸ್ಯೆ ಪರಿಹರಿಸಲು ಗ್ರಾಮಸ್ಥರ ಆಗ್ರಹ
ಸುಂಟಿಕೊಪ್ಪ: ಬಡ ರೋಗಿಗಳು, ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಸರ್ಕಾರ ಜಿಲ್ಲಾಸ್ಪತ್ರೆಗಳನ್ನು ತೆರೆದಿದೆ. ಆದರೆ ಜಿಲ್ಲಾಸ್ಪತ್ರೆಗಳಲ್ಲಿ ಅವ್ಯವಸ್ಥೆ, ವೈದ್ಯರ ಕೊರತೆ, ಸ್ಕಾೃನಿಂಗ್ ಸೇರಿ ಹಲವು ಸೌಲಭ್ಯಗಳು ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಇನ್ನಿಲ್ಲದ ತೊಂದರೆ ಎದುರಾಗಿದೆ. ಹಳೆಯ ಜಿಲ್ಲಾ ಆಸ್ಪತ್ರೆಯ ಕಟ್ಟಡಗಳನ್ನು ಕೆಡವಿ ಇಲ್ಲಿ ಬಹು ಮಹಡಿ ಕಟ್ಟಡ ನಿರ್ಮಿಸಲಾಗಿದೆ. 350 ಹಾಸಿಗೆಗಳಿಂದ 750 ಹಾಸಿಗೆ ವ್ಯವಸ್ಥೆಯಾಗಿ ಮೇಲ್ದರ್ಜೆಗೆ ಏರಿದೆ. ಮಡಿಕೇರಿ ಜಿಲ್ಲಾ ಆಸ್ಪತ್ರೆ ಜಿಲ್ಲಾ ವಿಜ್ಞಾನ ಸಂಸ್ಥೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಬಡ ರೋಗಿಗಳ ಚಿಕಿತ್ಸೆಗಾಗಿ ಸರ್ಕಾರ ಔಷಧ ಮತ್ತು ವೈದ್ಯಕೀಯ ಉಪಕರಣಗಳನ್ನು ಒದಗಿಸಿದೆ. ಆದರೆ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಮಾನವೀಯತೆ ಇಲ್ಲದ ಸಿಬ್ಬಂದಿಯಿಂದ ರೋಗಿಗಳ ಪಾಡು ನರಕಮಯವಾಗಿದೆ ಎಂಬ ಮಾತು ವಿಜಯವಾಣಿ ನಡೆಸಿದ ಸಂವಾದದಲ್ಲಿ ಕೇಳಿ ಬಂತು.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ, ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಇಲ್ಲಿನ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಮಡಿಕೇರಿ ಜಿಲ್ಲಾ ಆಸ್ಪತ್ರೆ ಮೇಲೆ ಅವಲಂಬಿತರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸಮಸ್ಯೆಯಿಂದ ಹೊರಬಾರದ ರೋಗಿಗಳು ಸಂವಾದದಲ್ಲಿ ರೋದನೆ ಹಂಚಿಕೊಂಡರು. ಹೆರಿಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿದವರನ್ನು 4 ರಿಂದ 5 ದಿನಗಳವರೆಗೆ ಅಲ್ಲೇ ಇರಿಸಿಕೊಂಡು ಸಂಬಂಧಿಕರನ್ನು ರೋಗಿಯ ಭೇಟಿಗೆ ಅವಕಾಶ ಕಲ್ಪಿಸಿಕೊಡದೆ ಸತಾಯಿಸಲಾಗುತ್ತದೆ. ಮೂಲತಃ ಕೊಡಗಿನವರೇ ಆದ ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ವೈದ್ಯರ ಕೊರತೆ ಮತ್ತು ಎಂಆರ್‌ಐ ಚಿಕಿತ್ಸೆ ಲಭ್ಯವಾಗದಿರುವ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಸಂವಾದದಲ್ಲಿ ಭಾಗವಹಿಸಿದ್ದವರು ಆಗ್ರಹಿಸಿದರು.
ಭೇಟಿ ಸಮಯ ಬದಲಿಸಬೇಕು
ಆಸ್ಪತ್ರೆ ವಾರ್ಡುಗಳಲ್ಲಿ ದಾಖಲಾದ ರೋಗಿಗಳನ್ನು ಸಂಬಂಧಿಕರು ಹಾಗೂ ಹಿತೈಷಿಗಳು ಭೇಟಿ ಮಾಡಲು ಮಧ್ಯಾಹ್ನ 12 ಗಂಟೆಯ ನಂತರ ಪ್ರವೇಶ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದರಿಂದ ರೋಗಿಗಳ ಆರೋಗ್ಯ ವಿಚಾರಿಸಲು ಕುಟುಂಬಸ್ಥರಿಗೆ ಕಷ್ಟಸಾಧ್ಯವಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಔತಣಕೂಟ ನಡೆಸಿ ಸಂಭ್ರಮಿಸಲು ಬರುವುದಿಲ್ಲ. ರೋಗಿಗಳಿಗೆ ಸಾಂತ್ವನ ಹೇಳಿ, ಬೆಳಗಿನ ಉಪಾಹಾರ ನೀಡಿ ಆರೋಗ್ಯ ವಿಚಾರಿಸಲು ಬರುತ್ತೇವೆ. ಆದರೆ ಎಡಬಿಗಂಡಿ ಸಮಯ ನಿಗದಿಗೊಳಿಸಿರುವುದು ಸೂಕ್ತವಲ್ಲ ಎಂದು ದೂರಿದರು.
ಹಣವನ್ನು ನಗದು ರೂಪದಲ್ಲೇ ಕಟ್ಟಬೇಕಿದೆ: ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಅತ್ಯಾಧುನಿಕ ಯಂತ್ರೋಪಕರಣವಿದೆ. ಅದರ ಸೇವೆ ಪಡೆಯಲು ರೋಗಿಗಳು ಹರಸಾಹಸಪಡಬೇಕಿದೆ. ಈಗ ಸರ್ಕಾರಿ ಬಸ್ಸಿನಲ್ಲೂ ಕ್ಯಾಶ್‌ಲೆಸ್ ವ್ಯವಸ್ಥೆ ಇದೆ. ಆದರೆ ಜಿಲ್ಲಾ ಆಸ್ಪತ್ರೆ ಶುಲ್ಕವನ್ನು ನಗದು ರೂಪದಲ್ಲೇ ನೀಡಬೇಕೆಂಬ ಬಿಗಿ ನಿಯಮ ಇದೆ. ರಾತ್ರಿವೇಳೆ ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಲು ಸಾಕಷ್ಟು ತೊಂದರೆಯಾಗುತ್ತಿದೆ. ಕ್ಯಾಶ್‌ಲೆಸ್ ವ್ಯವಸ್ಥೆ ಕಲ್ಪಿಸಿ ಕ್ಯೂ ಆರ್‌ಕೋಡ್ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಆಸ್ಪತ್ರೆ ಆಡಳಿತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕೊಡಗಿನ ಬಹುತೇಕ ತಾಲೂಕು ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮೀಣ ಆರೋಗ್ಯ ಉಪಕೇಂದ್ರಗಳಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ನರ್ಸ್‌ಗಳ ಲಭ್ಯತೆಯೂ ಇಲ್ಲ. ಹಾಗಾಗಿ ಜಿಲ್ಲಾಸ್ಪತ್ರೆಗೆ ಬಹುತೇಕ ರೋಗಿಗಳು ದೌಡಾಯಿಸುವುದು ಅನಿವಾರ್ಯವಾಗಿದೆ. ನೊಂದು ಬಂದ ರೋಗಿಗಳನ್ನು ಸರ್ಕಾರಿ ಸಿಬ್ಬಂದಿ ಪ್ರೀತಿಯಿಂದ ಉಪಚರಿಸುವ ವ್ಯವಸ್ಥೆ ಜಾರಿಗೆ ಬರುವುದು ಯಾವಾಗ ಎಂದು ಹಲವರು ಬೇಸರ ತೋಡಿಕೊಂಡರು.
ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರು, ಕೊಣನೂರು, ಅರಕಲಗೊಡು ಭಾಗದಲ್ಲಿರುವ ಅಸ್ಸಾಂ ಮೂಲದ ಕಾರ್ಮಿಕರು ಜಿಲ್ಲಾ ಆಸ್ಪತ್ರೆಗೆ ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಬಡ ಕಾರ್ಮಿಕರು ಎಂಬ ಕಾರಣಕ್ಕಾಗಿ ಇವರನ್ನು ಕೀಳಾಗಿ ಕಾಣುವ ಪ್ರವೃತ್ತಿ ಇದೆ. ಜಿಲ್ಲೆಯ ವಿವಿಧ ಸಂಘಟನೆ, ಹೋರಾಟಗಾರರಿಗೆ ಈ ಸಮಸ್ಯೆ ಗೊತ್ತಿದ್ದರೂ ಅವರು ಸುಮ್ಮನೆ ಇರುವುದು ದುರಂತವಾಗಿದೆ.
ಪ್ರಮುಖರು ಗಮನಹರಿಸಬೇಕು: ಜಿಲ್ಲಾ ಆಸ್ಪತ್ರೆಯು ಕೊಡಗು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಡಳಿತದ ವ್ಯಾಪ್ತಿಯಲ್ಲಿದೆ. ಇದರ ಡೀನ್, ಪ್ರಾಚಾರ್ಯರು, ಸರ್ಜನ್ ಮತ್ತು ವೈದ್ಯಕೀಯ ಅಧೀಕ್ಷಕರು ಇಲ್ಲಿನ ಕುಂದು ಕೊರತೆಯನ್ನು ನೀಗಿಸಿ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕಿಸಿ ಕೊಡಲು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು ಎಂದು ಸಂವಾದದಲ್ಲಿ ಭಾಗವಹಿಸಿದವರು ಆಗ್ರಹಿಸಿದರು.