ಅಮೃತ್ ಯೋಜನೆಯಿಂದ ಸಂಕಷ್ಟ

ಕಾರ್ನಾಡು ಪ್ರಜಾಸೌಧದ ಬಳಿ ಪೈಪ್‌ಲೈನ್ ಹೊಂಡ ತೋಡುವ ಸಂದರ್ಭ ಬಿಎಸ್‌ಎನ್‌ಎಲ್ ಕೇಬಲ್‌ಗೆ ಹಾನಿಯಾಗಿರುವುದು.
ಕಾರ್ನಾಡು ಪ್ರಜಾಸೌಧದ ಬಳಿ ಪೈಪ್‌ಲೈನ್ ಹೊಂಡ ತೋಡುವ ಸಂದರ್ಭ ಬಿಎಸ್‌ಎನ್‌ಎಲ್ ಕೇಬಲ್‌ಗೆ ಹಾನಿಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆ
  • ಸಾರ್ವಜನಿಕರಿಂದ ಎಚ್ಚರಿಕೆ
ಭಾಗ್ಯವಾನ್ ಸನಿಲ್ ಮೂಲ್ಕಿ
ಸ್ಥಳೀಯ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ‘ಅಮೃತ್ ಯೋಜನೆ’ ಇದೀಗ ಜನಪ್ರತಿನಿಧಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಾರ್ವಜನಿಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಸಮರ್ಪಕ ನಿರ್ವಹಣೆಯಿಲ್ಲದೆ ನಡೆಯುತ್ತಿರುವ ಕಾಮಗಾರಿಯಿಂದ ಕಿನ್ನಿಗೋಳಿ-ಮೂಲ್ಕಿ ವ್ಯಾಪ್ತಿಯ ಜನತೆ ಹೈರಾಣಾಗಿದ್ದಾರೆ.

ಸವಾರರ ಪ್ರಾಣಸಂಕಟ

ರಾಜ್ಯ ಹೆದ್ದಾರಿ ಬದಿಯಲ್ಲಿ ಪೈಪ್‌ಲೈನ್ ಅಳವಡಿಸಲು ರಸ್ತೆ ಅಗೆಯಲಾಗುತ್ತಿದೆ. ಅಗೆದ ಮಣ್ಣನ್ನು ರಸ್ತೆ ಬದಿಯಲ್ಲೇ ರಾಶಿ ಹಾಕುತ್ತಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಈ ಕಾಮಗಾರಿಯ ಅಬ್ಬರಕ್ಕೆ ಟೆಲಿಫೋನ್ ಇಲಾಖೆಯೂ ತತ್ತರಿಸಿದ್ದು, ಭೂಗತ ಕೇಬಲ್‌ಗಳು ತುಂಡಾಗಿ ಸಂಪರ್ಕ ಕಡಿತಗೊಂಡಿದೆ. ಆಧುನಿಕ ತಂತ್ರಜ್ಞಾನ ಲಭ್ಯವಿದ್ದರೂ ಹಳೇ ಪದ್ಧತಿಯಂತೆ ರಸ್ತೆ ಅಗೆದು ಜನಸಾಮಾನ್ಯರಿಗೆ ತೊಂದರೆ ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗುಂಡಿ ಬಿದ್ದ ರಸ್ತೆಗಳು

ಕುಬೆವೂರು ಶಿಮಂತೂರು ದೇವಸ್ಥಾನದ ಸಂಪರ್ಕ ರಸ್ತೆ ಹಾಗೂ ಕೆಂಚನಕೆರೆ ತಿರುವು ಬಳಿ ಹೆದ್ದಾರಿಯನ್ನು ಅಗೆದು ಹಾಕಲಾಗಿದ್ದು, ಸದ್ಯ ಇದು ಅಪಾಯಕಾರಿ ಹೊಂಡಗಳಾಗಿ ಮಾರ್ಪಟ್ಟಿವೆ. ಮಳೆಗಾಲ ಸಮೀಪಿಸುತ್ತಿದ್ದರೂ ಈ ಗುಂಡಿಗಳನ್ನು ಮುಚ್ಚುವ ಗೋಜಿಗೆ ಅಧಿಕಾರಿಗಳು ಮುಂದಾಗಿಲ್ಲ.

ಪ್ರತಿಭಟನೆಯ ಎಚ್ಚರಿಕೆ

ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈಗಾಗಲೇ ಮಳೆ ನೀರು ಹರಿಯುವ ಸಮಸ್ಯೆ ಇದೆ. ಇದರ ಮೇಲೆ ಪೈಪ್‌ಲೈನ್ ಕಾಮಗಾರಿ ‘ಗಾಯದ ಮೇಲೆ ಬರೆ ಎಳೆದಂತಾಗಿದೆ’. ಕೂಡಲೇ ಸ್ಥಳೀಯ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಕಾಮಗಾರಿಯನ್ನು ಸರಿಪಡಿಸಬೇಕು. ತಪ್ಪಿದ್ದಲ್ಲಿ ತಾಲೂಕು ಆಡಳಿತದ ಪ್ರಜಾಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.

ಮಳೆಗಾಲದಲ್ಲಿ ಕೃತಕ ನೆರೆಯ ಭೀತಿ

ಕಾರ್ನಾಡು ಗೇರುಕಟ್ಟೆಯ ಪ್ರಜಾಸೌಧದ ಬಳಿ ಮುನ್ನೆಚ್ಚರಿಕೆ ಇಲ್ಲದೆ ನಡೆಸಿದ ಕಾಮಗಾರಿಯಿಂದ ಬಿಎಸ್‌ಎನ್‌ಎಲ್ ಕೇಬಲ್‌ಗಳು ಹಾನಿಗೊಳಗಾಗಿವೆ. ಇದರಿಂದ ಇಂಟರ್ನೆಟ್ ಸೌಲಭ್ಯ ವ್ಯತ್ಯಯಗೊಂಡು ಗ್ರಾಹಕರು ಸಂಕಷ್ಟದಲ್ಲಿದ್ದಾರೆ. ಮತ್ತೊಂದೆಡೆ, ಮಳೆ ನೀರು ಹರಿಯುವ ಚರಂಡಿಯನ್ನೇ ಅಗೆದು ಪೈಪ್ ಹಾಕಲಾಗಿದ್ದು, ಮಣ್ಣು ಸರಿಯಾಗಿ ತುಂಬದ ಕಾರಣ ತೋಡುಗಳು ಮುಚ್ಚಿ ಹೋಗಿವೆ. ಮಳೆಗಾಲದಲ್ಲಿ ಈ ಸಡಿಲ ಮಣ್ಣು ಕೆಸರಾಗಿ ರಸ್ತೆಗಿಳಿಯುವುದಲ್ಲದೆ, ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಕೃತಕ ನೆರೆ ಉಂಟಾಗುವ ಭೀತಿ ಎದುರಾಗಿದೆ.

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿಯನ್ನು ಇಲಾಖೆ ಇಂಜಿನಿಯರ್‌ಗಳು ರೂಪಿಸಬೇಕು. ಹಳೆ ಕಾಲದ ಯೋಚನೆಯಿಂದ ಯೋಜನೆ ರೂಪಿಸುದಲ್ಲಿ ಸಮಸ್ಯೆ ತಪ್ಪದು. ಈ ಬಗ್ಗೆ ಜನಪ್ರತಿನಿಧಿಗಳು ಗಮನಿಸಬೇಕು.

— ಶರತ್ ಕಾರ್ನಾಡ್ ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net