ಸಮಸ್ಯೆಗಳ ಕೂಪ ಕರಿಕೆ ಗ್ರಾಮ

19adarshkdga4
Published on

ಮಡಿಕೇರಿ: ಕೊಡಗು ಜಿಲ್ಲೆಯ ಗಡಿ ಪ್ರದೇಶ ’ಕರಿಕೆ ಗ್ರಾಮ’ ವಿದ್ಯುತ್, ಆಸ್ಪತ್ರೆ, ಹದಗೆಟ್ಟ ರಸ್ತೆ ವ್ಯವಸ್ಥೆಯಿಂದ ಸಮಸ್ಯೆಗಳ ಕೂಪವಾಗಿ ಮಾರ್ಪಡುತ್ತಿದೆ.

ಕರ್ನಾಟಕ ರಾಜ್ಯದ ಗಡಿ ಪ್ರದೇಶ ಕರಿಕೆ ಗ್ರಾಮ. ಈ ಗ್ರಾಮದ ಮಾರ್ಗವಾಗಿ ಭಾಗಮಂಡಲ-ಪಾಣತ್ತೂರಿಗೆ ತೆರಳುವ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ಯೋಗ್ಯವಲ್ಲದಂತಿದೆ. ಜತೆಗೆ ಮಳೆಗಾಲ ಆರಂಭವಾದ್ದರಿಂದ ವಿದ್ಯುತ್ ಸಮಸ್ಯೆ ಎದುರಾದರೆ, ಚಿಕಿತ್ಸೆಗೆ 30 ಕಿ.ಮೀ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕರಿಕೆಗೆ ಕರ್ನಾಟಕದ ಹತ್ತಿರದ ಪಟ್ಟಣ ಭಾಗಮಂಡಲ. ಕರಿಕೆಯ ನಿವಾಸಿಗಳು ವಾಣಿಜ್ಯ ಉದೇಶಕ್ಕೆ ಸಾಮಾನ್ಯವಾಗಿ ಹತ್ತಿರದಲ್ಲೇ ಇರುವ ಕೇರಳದ ಪಾಣತ್ತೂರು, ಕಾಂಞಂಗಾಡ್ ಪಟ್ಟಣಗಳನ್ನು ಅವಲಂಬಿಸಿದ್ದಾರೆ. ಆರೋಗ್ಯ ಸಮಸ್ಯೆ ಕಂಡುಬಂದರೆ ಉಳ್ಳವರು ಪಾಣತ್ತೂರು ಅಥವಾ ಸುಳ್ಯದ ಆಸ್ಪತ್ರೆಗೆ ತೆರಳುತ್ತಾರೆ. ಬಹುಸಂಖ್ಯೆಯಲ್ಲಿ ಇರುವ ಕೂಲಿಕಾರ್ಮಿಕರು, ಬಡವರು ಅನಿವಾರ್ಯವಾಗಿ ಭಾಗಮಂಡಲ ಅಥವಾ ಮಡಿಕೇರಿಗೆ ತೆರಳಬೇಕಾಗುತ್ತದೆ. ಆದರೆ, ಜಿಲ್ಲಾ ಕೇಂದ್ರವನ್ನು ಸಂಪರ್ಕಿಸಲು ಇರುವುದು ಇದೊಂದೇ ರಸ್ತೆ. ಇಲ್ಲಿಯೂ ಸಂಪರ್ಕ ಬಂದ್ ಆದರೆ ಏನು ಮಾಡುವುದು ಎನ್ನುವುದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಕೋವಿಡ್ ಹಿನ್ನೆಲೆ ರಸ್ತೆ ಬಂದ್: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮಣ್ಣು ಹಾಕಿ ಬಂದ್ ಮಾಡಿದೆ. ಪರಿಣಾಮ ಪಕ್ಕದ ರಾಜ್ಯವನ್ನು ಅವಲಂಬಿಸಿದ್ದ ಕರಿಕೆ ಗ್ರಾಮಸ್ಥರಿಗೆ ಎಲ್ಲ ರೀತಿಯ ಸಮಸ್ಯೆ ಕಾಡತೊಡಗಿದೆ ಎಂದು ಗ್ರಾಮಸ್ಥ ಸೀರಾಜ್ ವಿಜಯವಾಣಿಗೆ ತಿಳಿಸಿದ್ದಾರೆ.

ಪಾಣತ್ತೂರಿಗೆ ತೆರಳಲು ಅವಕಾಶ ನೀಡಿ: ಕೋವಿಡ್19 ವೈರಸ್ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹ. ಆದರೆ, ಗ್ರಾಮದ ನಿವಾಸಿಗಳಿಗೆ ಆಸ್ಪತ್ರೆಗೆ ತೆರಳಲು ಸಮಸ್ಯೆ ಎದುರಾಗಿದೆ. ಮಡಿಕೇರಿ ಜಿಲ್ಲಾಸ್ಪತ್ರೆ ದೂರವಾಗಿದ್ದು, ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಹಿನ್ನೆಲೆ ಕರಿಕೆ ಗ್ರಾಮಸ್ಥರಿಗೆ ಮಾತ್ರ ಪಾಣತ್ತೂರಿಗೆ ತೆರಳಲು ಐ.ಡಿ. ಕಾರ್ಡ್ ಪರಿಶೀಲಿಸಿ ತೆರಳುವಂತೆ ಅನುವು ಮಾಡಿಕೊಡಬೇಕು ಎಂದು ಸೀರಾಜ್ ಮನವಿ ಮಾಡಿದ್ದಾರೆ.

ಗ್ರಾಮ ವ್ಯಾಪ್ತಿಯಲ್ಲಿ ಡೆಂೆ ಕೂಡ ಕಂಡುಬರುತ್ತಿದ್ದು, ರಕ್ತ ಪರೀಕ್ಷೆ ಮಾಡಲು ಮಡಿಕೇರಿಗೆ ತೆರಳಬೇಕಾಗಿದೆ. ಬಸ್ ಸಮಸ್ಯೆ ಇರುವುದರಿಂದ ಇದು ಕಷ್ಟಸಾಧ್ಯವಾಗಿದೆ. ಜತೆಗೆ ಆಂಬುಲೆನ್ಸ್ ಸಮಸ್ಯೆ ಇದೆ. ಸೀಮಿತ ಔಷಧಗಳು ಮಾತ್ರ ಲಭ್ಯವಾಗುತ್ತಿದೆ. ಇದರಿಂದ ಪಾಣತ್ತೂರಿಗೆ ಹೋಗಿಬರಲು ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದಾರೆ.

ವಿದ್ಯಾರ್ಥಿಗಳಿಗೆ ತೊಂದರೆ: ಕರಿಕೆ ಗ್ರಾಮದಲ್ಲಿ 1ರಿಂದ ಎಸ್‌ಎಸ್‌ಎಲ್‌ಸಿವರೆಗೆ ತರಗತಿಗಳು ಇವೆ. ಆದರೆ ಪಿಯುಸಿ, ಪದವಿ ಪಡೆಯಲು ಭಾಗಮಂಡಲ, ಮಡಿಕೇರಿ, ಸುಳ್ಯ ಕಡೆಗೆ ತೆರಳಬೇಕಾಗಿದೆ. ಇಲ್ಲಿಗೆ ಹೋಗಲು ವಿದ್ಯಾರ್ಥಿಗಳು ಬೆಳಗ್ಗೆ 6 ಗಂಟೆಗೆ ಮನೆ ಬಿಡಬೇಕಾಗಿದೆ. ಸಂಜೆ ಮನೆಗೆ ಬರಲು 7 ಗಂಟೆಯಾಗುತ್ತದೆ. ಇದರಿಂದ ಮಕ್ಕಳಿಗೆ ಓದಿಕೊಳ್ಳಲು ತೊಂದರೆಯಾಗಿದೆ. ಗ್ರಾಮಕ್ಕೆ ಕಾಲೇಜು ಅವಶ್ಯಕತೆ ಇದ್ದು, ಸರ್ಕಾರ ಎಚ್ಚೆತ್ತು ಕರಿಕೆ ಗ್ರಾಮಕ್ಕೆ ಕಾಲೇಜು ನಿರ್ಮಾಣ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಹಾಲಿನ ಡೇರಿ ಇಲ್ಲ: ಗ್ರಾಮದಲ್ಲಿ ಹೈನುಗಾರಿಕೆ ಮಾಡುತ್ತಿದ್ದಾರೆ. ಆದರೆ ಹಾಲು ಮಾರಲು ಸೂಕ್ತ ವ್ಯವಸ್ಥೆ ಇಲ್ಲ. ಪಾಣತ್ತೂರು ಗ್ರಾಮಕ್ಕೆ ತೆರಳಿ ಲೀಟರ್‌ಗೆ 40 ರೂ.ನಂತೆ ಮಾರಲಾಗುತ್ತಿತ್ತು. ಆದರೆ ಈಗ ಕುಶಾಲನಗರದ ಡೇರಿಗೆ ಹಾಕಲು ಹೋಗುತ್ತಾರೆ. ಆದರೆ 70ಕ್ಕೂ ಹೆಚ್ಚು ಕಿ.ಮೀ. ತೆರಳಿ ಹಾಲು ನೀಡಲು ಸಾಧ್ಯವಿಲ್ಲ. ಅಲ್ಲದೆ ಲೀಟರ್‌ಗೆ ಕೇವಲ 26 ರೂ. ನೀಡುತ್ತಾರೆ. ಇದರಿಂದ ನಮ್ಮ ವಾಹನ ಬಾಡಿಗೆಯೂ ಬರುವುದಿಲ್ಲ. ಆದ್ದರಿಂದ ಪಾಣತ್ತೂರಿಗೆ ಹಾಲು ನೀಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಕೋರಿದ್ದಾರೆ.

ಗ್ರಾಮಕ್ಕೆ ಒಂದೇ ಬಸ್: ಕರಿಕೆ ಗ್ರಾಮಕ್ಕೆ ಒಂದು ಸರ್ಕಾರಿ ಬಸ್ ಸಂಚರಿಸುತ್ತಿದೆ. ಬೆಳಗ್ಗೆ 7 ಗಂಟೆಗೆ ಕರಿಯಿಂದ, ಸಂಜೆ 7 ಗಂಟೆಗೆ ಮಡಿಕೇರಿಯಿಂದ ಕರಿಕೆಗೆ ಇದೆ. ಸಣ್ಣ ವಸ್ತು ಬೇಕಾದರೂ ಒಂದು ದಿನ ವ್ಯರ್ಥವಾಗಲಿದೆ. ಆದ್ದರಿಂದ ಗ್ರಾಮಕ್ಕೆ ಬಸ್‌ಗಳ ವ್ಯವಸ್ಥೆಯಾಗಬೇಕಿದೆ.

ವಿದ್ಯುತ್ ಸಮಸ್ಯೆ: ಮಳೆ ಬಂದರೆ ಮರಗಳು ಬಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳುತ್ತವೆ. ಸೆಸ್ಕ್ ಸಿಬ್ಬಂದಿ ಲೈನ್ ಮೇಲೆ ಹೋದ ಮರದ ರೆಂಬೆಗಳನ್ನು ತೆಗೆಯುವ ಕೆಲಸ ಮಾಡಬೇಕು. ಆದರೆ, ಗ್ರಾಮಸ್ಥರೇ ಮಾಡುತ್ತಿದ್ದಾರೆ. 32 ಟ್ರಾನ್ಸ್‌ಫಾರ್ಮರ್ ಇರುವ ಗ್ರಾಮಕ್ಕೆ ಇಬ್ಬರು ಲೈನ್‌ಮನ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಟವರ್ ಮಾತ್ರ ಇದೆ. ಇದು ವಿದ್ಯುತ್ ಇಲ್ಲದಿದ್ದರೆ ನೆಟ್‌ವರ್ಕ್ ಸಮಸ್ಯೆ ಕಾಡುತ್ತದೆ. ತುರ್ತು ಸಂದರ್ಭದಲ್ಲಿ ಪರದಾಡುವ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ.

ತುರ್ತುಚಿಕಿತ್ಸೆಗೆ ಕಷ್ಟ: ಗ್ರಾಮಸ್ಥರು ಜ್ವರ, ನೆಗಡಿ ಸೇರಿ ಸಣ್ಣಪುಟ್ಟ ರೋಗಗಳಿಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಅವಲಂಬಿಸುತ್ತಾರೆ. ಆದರೆ ಹೃದಯಾಘಾತ, ಡೆಂೆ, ಅಪಘಾತ ಇತ್ಯಾದಿಗಳಿಗೆ ಜಿಲ್ಲಾಸ್ಪತ್ರೆಗೆ ಬರಬೇಕಾಗಿದೆ. ರಸ್ತೆ ದುರಸ್ತಿಗೊಳ್ಳದ ಹಿನ್ನೆಲೆ ಸಂಚಾರ ಕಷ್ಟವಾಗಿದೆ. ಸಮುದಾಯ ಕೇಂದ್ರದಲ್ಲಿ ಲ್ಯಾಬ್ ವ್ಯವಸ್ಥೆ, ಆಂಬುಲೆನ್ಸ್ ಇಲ್ಲದ ಪರಿಣಾಮ ನೆರೆ ರಾಜ್ಯದ ಪಾಣತ್ತೂರು ಗ್ರಾಮವನ್ನು ಅವಲಂಬಿಸಿದ್ದರು. ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಮಡಿಕೇರಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಭಿವೃದ್ಧಿ ಇಲ್ಲದ ಗ್ರಾಮ ಇದಾಗಿದೆ. ಬಸ್ ವ್ಯವಸ್ಥೆ, ರಸ್ತೆ ದುರಸ್ತಿ, ಆಸ್ಪತ್ರೆ, ವಿದ್ಯುತ್ ಸಮಸ್ಯೆ ಇದೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಾಗಿದೆ.
> ಸೀರಾಜ್, ಅಧ್ಯಕ್ಷರು, ಗ್ರೀನ್‌ಸ್ಟಾರ್ ಯೂತ್ ಕ್ಲಬ್, ಕರಿಕೆ

ಡಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net