

ಮಂಗಳೂರು: ಲಾಕ್‌ಡೌನ್‌ನಿಂದ ಬಹುತೇಕ ಮಂದಿ ಮನೆಯಲ್ಲಿದ್ದಾರೆ. ಆದರೆ ತುರ್ತು ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಬೇಕಾಗಿ ಬಂದಾಗ ದುರದೃಷ್ಟಕ್ಕೆ ವಾಹನ ಕೆಟ್ಟರೆ? ಹೌದು.. ಲಾಕ್‌ಡೌನ್‌ನಿಂದಾಗಿ ಗ್ಯಾರೇಜ್‌ಗಳು ಮುಚ್ಚಿರುವುದರಿಂದ ಸಂಕಷ್ಟ ಅನಭವಿಸುವ ಪರಿಸ್ಥಿತಿ ಎದುರಾಗಿದೆ.
ಆಂಬುಲೆನ್ಸ್, ಪೊಲೀಸ್ ವಾಹನಗಳು, ಗೂಡ್ಸ್ ಲಾರಿ, ಟ್ಯಾಂಕರ್‌ಗಳು, ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಇವುಗಳು ಕೆಟ್ಟರೆ ತಕ್ಷಣಕ್ಕೆ ದುರಸ್ತಿ ಮಾಡಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಇನ್ನೊಂದೆಡೆ ಟೈರ್ ಪಂಕ್ಚರ್ ಆದರೂ ಸರಿಪಡಿಸಲು ಅಂಗಡಿಗಳಿಲ್ಲ.
ಸಂಚಾರಿ ಸರ್ವಿಸ್ ನೀಡುವವರು ಇದ್ದರೂ, ಕರೊನಾ ಹಿನ್ನೆಲೆಯಲ್ಲಿ ಬಹುತೇಕರು ಸದ್ಯ ಸೇವೆ ಸ್ಥಗಿತಗೊಳಿಸಿದ್ದಾರೆ. ನಿಗದಿತ ಸ್ಥಳಕ್ಕೆ ತಲುಪಲು ಪೊಲೀಸರು ಕಿರಿಕಿರಿ ಮಾಡುತ್ತಿರುವುದರಿಂದ ರಗಳೆಯೇ ಬೇಡ ಎನ್ನುತ್ತಾರೆ. ಗ್ಯಾರೇಜ್‌ಗಳೇ ಬಂದ್ ಆಗಿರುವುದರಿಂದ ಟೋಯಿಂಗ್ ವಾಹನಗಳೂ ಇಲ್ಲ. ವಾಹನ ಹೊಂದಿರುವವರಿಗೆ ಸಣ್ಣಪುಟ್ಟ ರಿಪೇರಿ ಗೊತ್ತಿದ್ದರೆ ಸರಿಪಡಿಸಿ ಮುಂದಕ್ಕೆ ಹೋಗಬಹುದು. ಇಲ್ಲವಾದರೆ ವಾಹನವನ್ನು ಅಲ್ಲೇ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಸದ್ಯಕ್ಕಿದೆ.
ಲಾಕ್‌ಡೌನ್ ಆರಂಭದಿಂದಲೇ ವಾಹನಗಳ ಸರ್ವಿಸ್ ಸೆಂಟರ್‌ಗಳು ಮುಚ್ಚಿವೆ. ವಾಹನಗಳು ಇಂತಿಷ್ಟು ಕಿ.ಮೀ ಓಡಿದ ಬಳಿಕ ಆಯಿಲ್ ಚೇಂಜ್, ಜನರಲ್ ಚೆಕಪ್, ಸರ್ವಿಸ್ ಮೊದಲಾದವುಗಳನ್ನು ಮಾಡಿಸಬೇಕು. ಇದು ವಾಹನಗಳನ್ನು ಸುಸ್ಥಿತಿಯಲ್ಲಿಡುತ್ತವೆ. ಇಲ್ಲವಾದಲ್ಲಿ ಮಧ್ಯದಲ್ಲಿ ಕೈಕೊಡುವ ಸಾಧ್ಯತೆಯಿದೆ. ಆದ್ದರಿಂದ ಸಮಯ ನಿಗದಿಪಡಿಸಿ ಗ್ಯಾರೇಜ್ ತೆರೆದಿಡುವ ಜತೆಗೆ ಸಂಚಾರಿ ಮೆಕ್ಯಾನಿಕ್‌ಗಳಿಗೆ ಅವಕಾಶ ನೀಡಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ತುರ್ತು ಸೇವೆಗಳ ವಾಹನ ಸಂಚಾರಕ್ಕೆ ಅನುಮತಿ ನೀಡಿರುವಾಗ ವಾಹನ ದುರಸ್ತಿಗೆ ಸಂಬಂಧಿಸಿದ ಗ್ಯಾರೇಜ್, ಪಂಕ್ಚರ್ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಕು. ಕನಿಷ್ಠ ಹೆದ್ದಾರಿ ಬದಿಯ ಅಂಗಡಿಗಳನ್ನಾದರೂ ತೆರೆಸಬೇಕು. ಜತೆಗೆ ಸಂಚಾರಿ ದುರಸ್ತಿಯವರಿಗೂ ಅವಕಾಶ ನೀಡಬೇಕು. ರತ್ನಾಕರ್ ಅಮೀನ್ ಗ್ಯಾರೇಜ್ ಮಾಲೀಕ, ಮಂಗಳೂರು