ದೇವನಹಳ್ಳಿ ಶವಾಗಾರದಲ್ಲಿ ಮೂಲಸೌಕರ್ಯ ಕೊರತೆ

shaagara
Published on

 ಶಾಂತಮೂರ್ತಿ ದೇವನಹಳ್ಳಿ

ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಹಳೆಯ ಶವ ಪರೀಕ್ಷಾ ಕೊಠಡಿಯಲ್ಲಿ ಮೂಲ ಸೌಕರ್ಯ ಕೊರತೆ ಎದುರಾಗಿದ್ದರೆ, ಹೊಸದಾಗಿ ನಿರ್ಮಿಸಿರುವ ಕೊಠಡಿ ಉದ್ಘಾಟನೆಗೊಳ್ಳದೆ ಬೀಗ ಹಾಕಲಾಗಿದೆ ಪರಿಣಾಮವಾಗಿ ತಾಲೂಕು ವ್ಯಾಪ್ತಿಯ ಶವಪರೀಕ್ಷೆಗೆ ವಿಜಯಪುರ ಅಥವಾ ಅಕಾಶ್ ಆಸ್ಪತ್ರೆಗೆ ರವಾನಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಹೊಂದಿರುವ ದೇವನಹಳ್ಳಿ ವ್ಯಾಪ್ತಿಯಲ್ಲಿ ಅಪಘಾತ, ಕೊಲೆ, ಆತ್ಮಹತ್ಯೆ ಸೇರಿ ಅನೇಕ ಪ್ರಕರಣಗಳು ದಾಖಲಾಗುತ್ತಿರುತ್ತವೆ, ಇಂಥ ಸಂದರ್ಭದಲ್ಲಿ ಶವಪರೀಕ್ಷೆಗೆ ಪೊಲೀಸರು ಪರದಾಡುವಂತಾಗಿದೆ. ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿನ ಶವಾಗಾರದಲ್ಲಿ ಮುಖ್ಯವಾಗಿ ನೀರಿನ ಸಮಸ್ಯೆ ಕಾಡುತ್ತಿರುವುದು ಶವಪರೀಕ್ಷೆಗೆ ಪ್ರಮುಖ ತೊಡಕಾಗಿದೆ.

ಹಳೆಯದರಲ್ಲೇ ಅವಲಂಬನೆ: ಹೊಸದಾಗಿ ಶವಪರೀಕ್ಷಾ ಕೊಠಡಿ ನಿರ್ಮಾಣ ಮಾಡಿ ವಿದ್ಯುತ್, ನೀರು ಸೇರಿ ಅಗತ್ಯ ಸೌಲಭ್ಯಗಳಿವೆ ಆದರೆ ಅದಕ್ಕೆ ಚಾಲನೆ ನೀಡುವ ಕಾಲ ಕೂಡಿಬಂದಿಲ್ಲ. ಬದಲಿಗೆ ಮೂಲಸೌಕರ್ಯ ಎದುರಿಸುತ್ತಿರುವ ಹಳೇಯ ಶವಾಗಾರ ಕೊಠಡಿಯನ್ನೇ ಬಳಸಲಾಗುತ್ತಿದೆ ಆದರೆ ಮೂಲಸೌಕರ್ಯ ಕೊರತೆ ಕಾರಣ ಶವಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.

ರ‌್ಯಾಂಪ್ ಇಲ್ಲ: ಶವಾಗಾರದಲ್ಲಿ ಶವಗಳನ್ನು ಕೊಠಡಿಗೆ ಸಾಗಿಲು ರ‌್ಯಾಂಪ್ ವ್ಯವಸ್ಥೆ ಇಲ್ಲ ಇದರಿಂದ ಶವಗಳನ್ನು ಸಾಗಿಸುವ ವೇಳೆ ಅನೇಕ ಅಪಸವ್ಯಗಳು ನಡೆದ ಪ್ರಕರಣಗಳು ನಡೆದಿವೆ. ಇದರಿಂದ ಮೃತರ ಕುಟುಂಬದ ಕೆಂಗಣಿಗೆ ಸಿಬ್ಬಂದಿ ಗುರಿಯಾಗುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೊಸದಾಗಿ ನಿರ್ಮಾಣ ಮಾಡಿರುವ ಶವಾಗಾರದ ಬಾಗಿಲು ಮುಚ್ಚಿದ್ದಾರೆ. ಇದರಿಂದ ಶವಪರೀಕ್ಷೆಗೆ ತೊಂದರೆಯಾಗುತ್ತಿದ್ದು, ಅಧಿಕಾರಿಗಳು ಶವಪರೀಕ್ಷೆಗೆ ಬೇಕಾದ ಸೌಲಭ್ಯ ಒದಗಿಸಬೇಕು ಹಾಗೂ ನೂತನ ಶವಪರೀಕ್ಷೆ ಕಟ್ಟಡವನ್ನು ಶೀಘ್ರ ಪ್ರಾರಂಭಿಸಬೇಕು. ಇಲ್ಲವಾದರೆ ಸ್ಥಳೀಯವಾಗಿ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತದೆ ಎಂಬುದು ಜನರ ಆಕ್ರೋಶವಾಗಿದೆ.

ಧನಂಜಯ್ (ಮಂಜು) ಕೊರಮಂಗಲ ಗ್ರಾಪಂ ಅಧ್ಯಕ್ಷ

ತಾಲೂಕಿನಲ್ಲಿ ಅನೇಕ ಸಾವುಗಳು ಸಂಭವಿಸುತ್ತವೆ. ಶವಪರೀಕ್ಷೆ ಮಾಡಬೇಕಾಗುತ್ತದೆ. ಹಳೆಯ ಶವಪರೀಕ್ಷೆ ಕೊಠಡಿಯಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಹೊಸದಾಗಿ ಶವಪರೀಕ್ಷೆ ಕೊಠಡಿ ಇದ್ದರೂ ಅದನ್ನು ಬಳಸದೆ ಹಳೆಯ ಕೊಠಡಿಯಲ್ಲೇ ಶವಪರೀಕ್ಷೆ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನೂತನ ನಿರ್ಮಿಸಿರುವ ಶವಪರೀಕ್ಷೆ ಕೊಠಡಿಯನ್ನು ತಕ್ಷಣ ಪ್ರಾರಂಭಿಸಿ. ಅದಕ್ಕೆ ಬೇಕಾದ ಮೂಲಸೌಕರ್ಯ ಒದಗಿಸಿ ಶವಪರೀಕ್ಷೆಗೆ ಅನುಕೂಲ ಮಾಡಿಕೊಂಡಬೇಕು.

ಶಿವರಾಮೇಗೌಡ, ದೇವನಹಳ್ಳಿ

ನೂತನ ಶವಪರೀಕ್ಷೆ ಕೊಠಡಿ ಉದ್ಘಾಟನೆಯಾಗಿದ್ದು. ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕೊಠಡಿಗೆ ರ‌್ಯಾಂಪ್ ಅವಶ್ಯಕತೆ ಇದೆ ಹಾಗೂ ಈಗಿರುವ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದ್ದು, ಕೊಳವೆ ಬಾವಿ ಕೊರೆಸಲು ಹಾಗೂ ರ‌್ಯಾಂಪ್ ಅಳವಡಿಸುವುದರ ಜತೆಗೆ ಆಸ್ಪತ್ರೆಗೆ ಅತ್ಯವಶ್ಯಕ ಕಾಮಗಾರಿಗಳನ್ನು ಆಕ್ಷನ್ ಪ್ಲಾನ್‌ನಲ್ಲಿ ಸೇರಿಸಲಾಗಿದೆ. ಶೀಘ್ರದಲ್ಲೇ ನೂತನ ಶವಪರೀಕ್ಷೆ ಕೊಠಡಿ ಪ್ರಾರಂಭಿಸಲಾಗುವುದು.

ಶ್ರೀನಾಥ್‌ಗೌಡ, ತಾಪಂ ಇಒ

ಮೃತ ಸಂಬಂಧಿಕರ ಪರದಾಟ:

ಆವತಿಯ ಅತ್ತಿಬೆಲೆ ಗೇಟ್ ಬಳಿ ಜು.31ರಂದು ಬೆಳಗ್ಗೆ 6ಗಂಟೆಗೆ ಸಿಮೆಂಟ್ ಲೋಡರ್ ಕೆಲಸಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕೋರಮಂಗಲದ ನಿವಾಸಿ ಮುರಳಿ(35) ಎಂಬಾತನಿಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಮುರುಳಿ ಸ್ಥಳದಲ್ಲೇ ಮೃತಪಟ್ಟಿದ್ದ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ಪೋಲಿಸರು ತೆಗೆದುಕೊಂಡು ಹೋಗಿದ್ದರು. ಆಗ ಅಲ್ಲಿಗೆ ಬಂದ ಮೃತರ ಸಂಬಂಧಿಕರು ಮತ್ತು ಗ್ರಾಮದ ಮುಖಂಡರಿಗೆ ಶವಪರೀಕ್ಷಾ ಕೇಂದ್ರದಲ್ಲಿ ನೀರಿನ ಸೌಲಭ್ಯ ಸೇರಿ ಹಲವು ಮೂಲ ಸೌಲಭ್ಯಗಳಿಲ್ಲದೇ ಇರುವುದು ಕಂಡುಬಂದಿದ್ದು, ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net