ಕೋರ್ಟ್ ಎದುರಿನ ಚರಂಡಿ ಅವ್ಯವಸ್ಥೆ

mori
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪ್ರತಿ ಮಳೆಗಾಲಕ್ಕೂ ಮುನ್ನ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು, ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎನ್ನುವುದು ನಗರಸಭೆ ಕಡತಗಳಿಗೆ, ಅಧಿಕಾರಿ, ಜನಪ್ರತಿನಿಧಿಗಳ ಭಾಷಣಕ್ಕೆ ಸೀಮಿತವಾದಂತಾಗಿದೆ.

ಹೌದು! ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಹಲವು ಕಡೆಗಳಲ್ಲಿ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಚರಂಡಿಗಳ ಕುರುಹೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇವುಗಳ ಪೈಕಿ ದೊಡ್ಡಬಳ್ಳಾಪುರ ನ್ಯಾಯಾಲಯ ಸಂಕೀರ್ಣ ತಡೆಗೋಡೆಗೆ ಹೊಂದಿಕೊಂಡಂತಿರುವ ಚರಂಡಿಗಳು ಹೂಳು ತುಂಬಿಕೊಂಡು ಮುಚ್ಚೇ ಹೋಗಿವೆ. ಆದರೆ ಈ ಬಗ್ಗೆ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಬೇಸಿಗೆಯಲ್ಲಿಯೇ ಮಳೆಯಾಗುತ್ತಿದ್ದು, ನ್ಯಾಯಾಲಯದ ಮುಂಭಾಗದಲ್ಲಿ ಮಳೆ ನೀರು ನಿಂತು ಸಣ್ಣ ಕೆರೆಯಂತ ರೂಪ ಪಡೆಯುತ್ತಿದೆ, ಪ್ರತಿದಿನ ಸಾವಿರಾರು ಸಾರ್ವಜನಿಕರು, ವಕೀಲರು ಓಡಾಡುವ ಜಾಗದಲ್ಲಿನ ಅವ್ಯವಸ್ಥೆ ಬಗ್ಗೆ ನಗರಸಭೆ ಕಣ್ಣಿದ್ದು ಕುರುಡಂತೆ ವರ್ತಿಸುತ್ತಿದೆ. ಸಣ್ಣ ಮಳೆಯಾದರೂ ಮಳೆ ನೀರು ನ್ಯಾಯಾಲಯದ ಆವರಣಕ್ಕೆ ನುಗ್ಗುತ್ತದೆ. ಬೇಸಿಗೆ ಸಂದರ್ಭದಲ್ಲಿ ಚರಂಡಿಗಳಲ್ಲಿ ಹೂಳು ತೆಗೆದು ಸ್ವಚ್ಛ ಮಾಡಬೇಕಾದ ಸಿಬ್ಬಂದಿ ಅಧಿಕಾರಿಗಳ ಅಣತಿಗೆ ಕಾಯುತ್ತಿರುವಂತಿದೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ನೀಡುತ್ತಿಲ್ಲ ಇನ್ನು ನಗರಸಭೆ ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎನ್ನುವುದು ಇಲ್ಲಿನ ಪರಿಸ್ಥಿತಿ ಬೊಟ್ಟು ಮಾಡಿ ತೋರಿಸುತ್ತಿದೆ ಎಂಬುದು ಸಾರ್ವಜನಿಕರ ದೂರಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಇಲ್ಲ:

ಇನ್ನು ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿ, ತಳ್ಳುಗಾಡಿಗಳಲ್ಲಿ ರಾಜಾರೋಷವಾಗಿ ಪ್ಲಾಸ್ಟಿಕ್ ಕೈಚೀಲ ಸೇರಿ ಇನ್ನಿತರ ನಿಷೇದಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಲಾಗುತ್ತಿದೆ. ಬಳಕೆ ನಂತರ ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳು ಚರಂಡಿಗಳನ್ನು ಸೇರುತ್ತಿವೆ. ನ್ಯಾಯಾಲಯದ ಆವರಣದಲ್ಲಿನ ಚರಂಡಿಗಳಲ್ಲಿ ರಾಶಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ತುಂಬಿರುವುದು ಕಂಡುಬರುತ್ತಿದೆ.

ದೊಡ್ಡಬಳ್ಳಾಪುರ ನ್ಯಾಯಾಲಯ ಆವರಣದ ಮುಂಭಾಗದಲ್ಲಿನ ಚರಂಡಿ ಅವ್ಯವಸ್ಥೆ ಗಮನಿಸಬೇಕು, ನಗರಸಭೆ ಇದರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು, ಮಳೆಗಾಲ ಆರಂಭಕ್ಕೂ ಮುನ್ನ ಇದರಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸಿ ಮಳೆ ನೀರು ಹರಿಯಲು ಅನುವು ಮಾಡಿಕೊಡಬೇಕು. ನ್ಯಾಯಾಲಯದ ಮುಂಭಾಗವೇ ಇಂಥ ಪರಿಸ್ಥಿತಿ ಇದ್ದರೂ ನಗರ ಸಭೆ ಅಧಿಕಾರಿಗಳು ಏಕೆ ಗಮನ ನೀಡುತ್ತಿಲ್ಲ.

ಅನುಪಮಾ, ವಕೀಲೆ ದೊಡ್ಡಬಳ್ಳಾಪುರ

------

ಈಗಾಗಲೇ ಬೇಸಿಗೆ ಮಳೆಯಾಗುತ್ತಿದ್ದು, ಸಣ್ಣ ಮಳೆಗೂ ರಸ್ತೆಗಳು ಜಲಾವೃತಗೊಳ್ಳುತ್ತಿವೆ, ಮಳೆ ನೀರು ಸರಾಗವಾಗಿ ಹರಿಯದ ಕಾರಣ ಇಂಥ ಅವ್ಯವಸ್ಥೆಗಳು ಕಂಡುಬರುತ್ತಿವೆ. ಚರಂಡಿಗಳಲ್ಲಿ ನೀರು ನಿಂತು ಗಬ್ಬುವಾಸನೆ ರಾಚುತ್ತಿದೆ. ಸೊಳ್ಳೆ ನೊಣಗಳ ಕಾಟ ವಿಪರೀತವಾಗಿರುವುದರ ಜತೆಗೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ನಗರಸಭೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು.

ಸುಭಾಷ್, ವ್ಯಾಪಾರಿ ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net