

ಪುರುಷೋತ್ತಮ ಪೆರ್ಲ ಕಾಸರಗೋಡು
ನಗರದ ವಿವಿಧೆಡೆ ಅಲೆಮಾರಿ ಜಾನುವಾರುಗಳಿಂದ ವಾಹನ ಚಾಲಕರು ಹಾಗೂ ನಾಗರಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸುವುದರೊಂದಿಗೆ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಬಸ್‌ಗಳಿಗೆ ಅಡಚಣೆಯಾಗುವ ರೀತಿಯಲ್ಲಿ ಗುಂಪು ಸೇರುತ್ತಿವೆ. ಸ್ಕೂಟರ್ ಸೇರಿದಂತೆ ವಾಹನಗಳ ಸೀಟ್‌ಕವರ್ ಹಾಗೂ ಇತರ ಪ್ಲಾಸ್ಟಿಕ್ ವಸ್ತುಗಳನ್ನು ಕಡಿದು ಹಾಕುವ ಮೂಲಕ ದ್ವಿಚಕ್ರವಾಹನ ಸವಾರರಿಗೂ ಇವು ಕಂಟಕವಾಗುತ್ತಿವೆ.
ನಗರದ ಹೊಸ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಡಾಡಿ ಜಾನುವಾರುಗಳಿದ್ದು, ಇವುಗಳಲ್ಲಿ ಬಹುತೇಕ ಅಲೆಮಾರಿಗಳಾಗಿವೆ. ಕಟ್ಟಿಹಾಕಿ ಸಾಕುವ ಜಾನುವಾರುಗಳು ಸಂಜೆ ವೇಳೆಗೆ ಅವುಗಳ ವಾಸಸ್ಥಾನಕ್ಕೆ ತೆರಳುತ್ತಿದ್ದರೂ, ಬಹುತೇಕ ಜಾನುವಾರುಗಳು ನಿಲ್ದಾಣವನ್ನೇ ಆಶ್ರಯವನ್ನಾಗಿಸಿಕೊಂಡಿವೆ. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರ, ಕೋಟೆಕಣಿ ರಸ್ತೆ, ನುಳ್ಳಿಪ್ಪಾಡಿ ಸರಿದಂತೆ ವಿವಿಧೆಡೆ ಅಲೆಮಾರಿ ಜಾನುವಾರುಗಳು ರಸ್ತೆಗಳಲ್ಲೇ ಅಲೆದಾಡುತ್ತಿದ್ದು, ವಾಹನ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ಸಮಸ್ಯೆ ಎದುರಾಗುತ್ತಿದೆ.
ಹೊಸ ಬಸ್ ನಿಲ್ದಾಣದ ಬಸ್ ನಿಲುಗಡೆ ಪ್ರದೇಶದಲ್ಲಿ ಎಲ್ಲೆಡೆ ಜಾನುವಾರುಗಳೇ ತುಂಬಿಕೊಳ್ಳುತ್ತಿದ್ದು, ಕೆಲವೊಮ್ಮೆ ಬಸ್‌ಗಳ ನಿಲುಗಡೆ ಜಾಗವನ್ನೇ ಬದಲಾಯಿಸಬೇಕಾಗುತ್ತಿದೆ. ಹೊಸ ಬಸ್ ನಿಲ್ದಾಣ ವಠಾರದಲ್ಲಿರುವ ಬಹುತೇಕ ಜಾನುವಾರುಗಳು ಇಲ್ಲೇ ಹುಟ್ಟಿ ಬೆಳೆದವುಗಳಾಗಿದ್ದು, ಇಲ್ಲಿಂದ ಬೇರೆಲ್ಲೂ ಸಂಚರಿಸುತ್ತಿಲ್ಲ. ಮೇವಿಗಾಗಿ ಬೇರೆಡೆ ತೆರಳಿದರೂ, ಸಂಜೆ ವೇಳೆಗೆ ನಿಲ್ದಾಣಕ್ಕೇ ಬಂದು ಸೇರುತ್ತಿವೆ. ಮತ್ತೆ ಬೆಳಗ್ಗೆ ಬಹಳ ಹೊತ್ತಿನವರೆಗೂ ಇಲ್ಲೇ ಠಿಕಾಣಿ ಹೂಡುತ್ತಿರುವುದಾಗಿ ಸ್ಥಳೀಯ ವ್ಯಾಪಾರಿಗಳು ತಿಳಿಸುತ್ತಾರೆ.
ಜಾನುವಾರುಗಳ ಸಂಖ್ಯೆ ಕುಸಿಯುತ್ತಿರುವ ಕಾಲಘಟ್ಟದಲ್ಲಿ ನಗರಪ್ರದೇಶದಲ್ಲಿ ಜಾನುವಾರುಗಳು ಕಂಡುಬರುತ್ತಿರುವುದು ಆಶಾದಾಯಕವಾಗಿದ್ದರೂ, ಅಲೆಮಾರಿಯಾಗಿ ಸಂಚರಿಸುತ್ತಿರುವುದರಿಂದ ಅಪಘಾತ ಹಾಗೂ ಕಟುಕರ ಪಾಲಾಗುವ ಭೀತಿಯೂ ಎದುರಾಗಿದೆ. ಬಹುತೇಕ ಜಾನುವಾರುಗಳನ್ನು ಕಳ್ಳರು ಕದ್ದು ಕೊಂಡೊಯ್ಯುತ್ತಿರುವುದಾಗಿ ದೂರುಗಳಿವೆ.
ನಗರದಲ್ಲಿ ಅಲೆಮಾರಿ ಜಾನುವಾರುಗಳ ನಿಯಂತ್ರಣಕ್ಕೆ ನಗರಸಭೆ ಕ್ರಮಕೈಗೊಳ್ಳಲಿದೆ. ಸಂಬಂಧಪಟ್ಟವರು ತಮ್ಮ ಜಾನುವಾರುಗಳನ್ನು ಸಾರ್ವಜನಿಕ ಪ್ರದೇಶಗಳಿಗೆ ಬಿಡದೆ, ತಮ್ಮಲ್ಲೇ ಕಟ್ಟಿಹಾಕಿ ಪೋಷಿಸಬೇಕು. ನಗರಸಭೆ ವ್ಯಾಪ್ತಿಯ ಬಸ್‌ನಿಲ್ದಾಣ, ರಸ್ತೆಗಳಲ್ಲಿ ಅಲೆದಾಡುವ ಜಾನುವಾರುಗಳನ್ನು ಸೆರೆಹಿಡಿಯುವ ಮೂಲಕ ನಗರಸಭೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಅಬ್ಬಾಸ್ ಬೀಗಂ, ಅಧ್ಯಕ್ಷ, ಕಾಸರಗೋಡು ನಗರಸಭೆ https://www.vijayavani.net/distribution-of-food-dialysis-kit-to-tuberculosis-patients%e0%b2%a1%e0%b2%af%e0%b2%b2%e0%b2%b8%e0%b2%b8-%e0%b2%95%e0%b2%9f-%e0%b2%b5%e0%b2%a4%e0%b2%b0%e0%b2%a3 https://www.vijayavani.net/protest-by-the-protection-committee-on-21st