

ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಭಾಗಕ್ಕೆ ಸಮರ್ಪಕ ನೀರು ಹರಿಸಲು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ರೈತರು ಪಟ್ಟಣದಲ್ಲಿ ಮಂಗಳವಾರ ಸಂಚಾರ ತಡೆ ನಡೆಸಿದರು.
ಜಿಪಂ ಮಾಜಿ ಸದಸ್ಯ ಜೆ.ಶರಣಪ್ಪಗೌಡ ಮಾತನಾಡಿ, ಹಲವಾರು ವರ್ಷಗಳಿಂದ ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ನಾಲೆ ಮೇಲ್ಭಾಗದಲ್ಲಿ ಅಕ್ರಮ ನೀರಾವರಿಯಿಂದ ಕಾಲುವೆ ಕೊನೆಯ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲೆಯ ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಅಳವಡಿಕೆ ಮತ್ತು ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಕಾಲುವೆ ಕೊನೆಯ ಭಾಗದ ರೈತರು ತೊಂದರೆ ಅನುಭವಿಸುವಂತಾಗಿದೆ. ಕಾಲುವೆ ಕೊನೆಯ ಭಾಗದಲ್ಲಿನ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ಒದಗಿಸುವವರೆಗೆ ಈ ಹೋರಾಟದಿಂದ ಹಿಂದೆ ಸರಿಯಲ್ಲ. ಮೈಲ್ ಸಂಖ್ಯೆ 69 ರಲ್ಲಿ ಒಂದು ಅಡಿ ತಪ್ಪು ಗೇಜ್ ಇದ್ದು ಸರಿಪಡಿಸಬೇಕು. ಒಂದು ಅಡಿ ಗೇಜ್‌ನಿಂದ 450 ಕ್ಯೂಸೆಕ್ ನೀರು ಹರಿಯುವಲ್ಲಿ ವ್ಯತ್ಯಾಸವಾಗುತ್ತದೆ ಎಂದು ಶರಣಪ್ಪಗೌಡ ತಿಳಿಸಿದರು.
ರೈತಸಂಘದ ಉಪಾಧ್ಯಕ್ಷ ಅಮರೇಶಗೌಡ ಚಾಗಬಾವಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದರು. ಪ್ರಮುಖರಾದ ಚುಕ್ಕಿ ಸೂಗಪ್ಪ, ಸಿದ್ಧಲಿಂಗಪ್ಪಗೌಡ ನಾಗಡದಿನ್ನಿ, ಟಿ.ಆರ್.ಪಾಟೀಲ್, ಜಿ.ಲೋಕರಡ್ಡಿ, ಜೆ.ದೇವರಾಜ ಗೌಡ, ಅನಿತಾ ಮಂತ್ರಿ, ಉದಯಕುಮಾರ ಚಾಗಭಾವಿ, ಎಂ.ನಾಗರಾಜ ಗೌಡ, ಎಸ್.ದಾನನಗೌಡ, ನರಸಿಂಹರಾವ್ ಕುಲಕರ್ಣಿ, ಎಂ.ನಿಂಬೆಯ್ಯ ಸ್ವಾಮಿ, ಕಲ್ಲೂರು ಬಸವರಾಜ ನಾಯಕ, ವೈ.ಅಮರೇಶಪ್ಪ, ವಿಜಯ ಕುಮಾರ ಗುಡ್ಡದಮನಿ, ಬಸವರಾಜ ಭಂಡಾರಿ, ಅರಳಪ್ಪ ಯದ್ದಲದಿನ್ನಿ, ಎಂ.ಪ್ರಕಾಶ, ಬೀರಪ್ಪ ಕಡದಿನ್ನಿ, ವಿವಿಧ ಗ್ರಾಮಗಳ ರೈತರಿದ್ದರು.