

ಕುಂದಾಪುರ: ಮಳೆಗಾಲದಲ್ಲಿ ಅಥವಾ ಕಟ್ಟಿಗೆ ಅಭಾವ ಮೊದಲಾದ ಸಮಸ್ಯೆಗಳಿಂದ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿರುವುದರಿಂದ ವಿದ್ಯುತ್ ಚಿತಾಗಾರದಿಂದ ಇದೆಲ್ಲವೂ ಪರಿಹಾರವಾಗಲಿದೆ. ಇಂತಹ ಸ್ಥಳಗಳಿಗೆ, ಸರ್ಕಾರಿ ಶಾಲೆಗಳಿಗೆ ಸರ್ಕಾರದ ಅನುದಾನ ನೀಡಿದಾಗ ತೃಪ್ತಿ ಮತ್ತು ಇಂತಹ ಸ್ಥಳಗಳಿಗೆ ಬಂದಾಗ ಧನ್ಯತಾ ಭಾವನೆ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಉಡುಪಿ ಜಿಲ್ಲಾ ಪಂಚಾಯಿತಿ, ಕುಂದಾಪುರ ತಾಲೂಕು ಪಂಚಾಯಿತಿ ಮತ್ತು ಕೋಟೇಶ್ವರ ಗ್ರಾಮ ಪಂಚಾಯಿತಿ ವತಿಯಿಂದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಕೋಟೇಶ್ವರ ಗ್ರಾಪಂ.ನ ನಿಧಿಯಿಂದ 96 ಲಕ್ಷ ರೂ. ವೆಚ್ಚದಲ್ಲಿ ಕೋಟೇಶ್ವರದ ಹಿಂದು ರುದ್ರಭೂಮಿಯಲ್ಲಿ ನೂತನವಾಗಿ ನಿರ್ಮಿಸಲಾದ ವಿದ್ಯುತ್ ಚಿತಾಗಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕುಂದಾಪುರ ಶಾಸಕ ಎ.ಕಿರಣ್ ಕುವಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯುತ್ ಚಿತಾಗಾರ ನಿರ್ವಹಣೆ ಸುಲಭವಾಗಬೇಕಾದರೆ ಅದರ ಉಪಯೋಗ ಹೆಚ್ಚಾಗಬೇಕು. ಬೈಂದೂರಿನಿಂದ ಉಡುಪಿವರೆಗೆ ಎಲ್ಲರಿಗೂ ಇದರ ಬಗ್ಗೆ ವಾಹಿತಿ ನೀಡಿದಾಗ ಹೆಚ್ಚಿನ ಜನರು ಈ ಸೌಲಭ್ಯದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಹಿಂದು ರುದ್ರಭೂಮಿ ಸ್ಥಾಪಕ ಅಧ್ಯಕ್ಷ ಗಣೇಶ ಎಂ.ಕಾಮತ್, ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಜಯರತ್ನ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ದಿನೇಶ ಹೆಗ್ಡೆ ಮೊಳಹಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ಟೊ ಶುಭ ಹಾರೈಸಿದರು.
ಗಣೇಶ ಎಂ.ಕಾಮತ್, ರಂಗನಾಥ ಭಟ್, ಸುರೇಂದ್ರ ವಾರ್ಕೋಡು, ಗುತ್ತಿಗೆದಾರ ಕೆದೂರು ಸದಾನಂದ ಶೆಟ್ಟಿ, ನಿರ್ಮಿತಿ ಕೇಂದ್ರದ ಅಭಿಯಂತರ ಮಹೇಶ್, ತಾಂತ್ರಿಕ ನಿರ್ವಹಣೆಗಾರ ನಾಗರಾಜ ಬೆಂಗಳೂರು, ವಿಠಲದಾಸ ಭಟ್, ರಾಜಶೇಖರ ಶೆಟ್ಟಿ, ಕೆ.ಜಿ.ವೈದ್ಯ, ಗುರುರಾಜ್ ರಾವ್ ಮತ್ತು ರತ್ನಾಕರ ಕಾಮತ್ ಅವರನ್ನು ಗೌರವಿಸಲಾಯಿತು.
ಕೋಟೇಶ್ವರ ಗ್ರಾಪಂ ಉಪಾಧ್ಯಕ್ಷೆ ಆಶಾ ವಿ., ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ ಪೂಜಾರಿ, ಗೋಪಾಡಿ ಗ್ರಾಪಂ ಅಧ್ಯಕ್ಷ ಸುರೇಶ ಶೆಟ್ಟಿ ಉಪಸ್ಥಿತರಿದ್ದರು.
ಪಿಡಿಒ ದಿನೇಶ ನಾಯಕ್ ಸ್ವಾಗತಿಸಿದರು. ಹಿಂದು ರುದ್ರಭೂಮಿ ಸದಸ್ಯ ರಾಜಶೇಖರ ಶೆಟ್ಟಿ ಪ್ರಸ್ತಾವನೆಗೈದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.