

ಲಿಂಗಸುಗೂರು: ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಪಟ್ಟಣದಲ್ಲಿ ಕುಡಿಯುವ ನೀರಿನ ಕೊಳವೆ ಮಾರ್ಗ ಅಳವಡಿಸಿ ಗೃಹ ಸಂಪರ್ಕ ಕಲ್ಪಿಸಲಾಗುವುದು. ಈ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಮೃತ್ 2.0 ಯೋಜನೆ ಅನುಷ್ಠಾನಕ್ಕೆ ಭೂಮಿ ಪೂಜೆ ನೆರವೇರಿಸಿ ಬುಧವಾರ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅಮೃತ್ 2.0 ಯೋಜನೆಯಡಿ ಆದ್ಯತೆ ಮೇರೆಗೆ ಲಿಂಗಸುಗೂರು ತಾಲೂಕು ಆಯ್ಕೆ ಮಾಡಿದ್ದಾರೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ದಿನೇದಿನೆ ಜನಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ 30 ವರ್ಷಗಳ ಜನಸಂಖ್ಯೆ ಹೆಚ್ಚಳ ಆಧರಿಸಿ ಅಮೃತ್ 2.0 ಯೋಜನೆಯಡಿ 93.76 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕೊಳವೆ ಮಾರ್ಗ ಅಳವಡಿಸಿ ಗೃಹ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಳೆದ ಹಲವು ವರ್ಷಗಳಿಂದ ಲಿಂಗಸುಗೂರು, ಹಟ್ಟಿ, ಮುದಗಲ್‌ನಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಜಿಲ್ಲೆಯಲ್ಲಿ ಜಲಧಾರೆ, ಜೆಜೆಎಂ, ಅಮೃತ 2.0 ಯೋಜನೆಗಳ ಜಾರಿಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಶಾಸಕ ವಜ್ಜಲ್ ಹೇಳಿದರು.
ಎಂಎಲ್‌ಸಿ ಶರಣಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಕಳೆದ 1996-97 ರಲ್ಲಿ 20 ವರ್ಷಗಳ ಜನಸಂಖ್ಯೆ ಹೆಚ್ಚಳ ಆಧರಿಸಿ ಕೆರೆ ನಿರ್ಮಿಸಿ, ಬಲದಂಡೆ ನಾಲೆ ಮೂಲಕ ನೀರು ಸಂಗ್ರಹಿಸಿ ಶುದ್ಧೀಕರಣ ಘಟಕದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಮೃತ್ 2.0 ಯೋಜನೆ ಅನುಷ್ಠಾನದಿಂದ ಪ್ರತಿನಿತ್ಯ 135 ಲೀ. ಕುಡಿಯುವ ನೀರು ಪ್ರತಿ ಮನೆಗೆ ಸಿಗಲಿದೆ. ಜೆಜೆಎಂ ಕಾಮಗಾರಿಗೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದನ್ನು ನಾವು ಕಾಣುತ್ತಿದ್ದೇವೆ. ಅಮೃತ್ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ್ 2.0 ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆಯನ್ನು ಎಲ್‌ಇಡಿ ಪರದೆ ಮೂಲಕ ಮಾಡಲಾಯಿತು. ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು, ಉಪಾಧ್ಯಕ್ಷೆ ಶರಣಮ್ಮ ಅಮರಪ್ಪ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಚಂದ್ರಶೇಖರ ಚೌಹಾಣ್, ಪುರಸಭೆ ಸಿಒ ರಡ್ಡಿರಾಯನಗೌಡ, ಗುತ್ತಿಗೆದಾರ ಅವಿನಾಶ ಇತರರಿದ್ದರು.