

ಆಯ್ದಕ್ಕಿ ಲಕ್ಕಮ್ಮ ವೇದಿಕೆ ಲಿಂಗಸುಗೂರು
ಸಾಹಿತ್ಯ ಸಮ್ಮೇಳನ ಭಾಷೆಗೆ ಸೀಮಿತವಾಗದೆ ಬದುಕು ಬಲಗೊಳ್ಳವ ಚರ್ಚೆಗೆ ಮುಂದಾಗಲಿ ಎಂದು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ವೀರಹನುಮಾನ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು. ನಾನು ವಿದ್ಯಾರ್ಥಿಯಾಗಿದ್ದಾಗ ಎಸ್‌ಎಫ್‌ಐ, ಡಿವೈಎಫ್‌ಐ ಮತ್ತು ಸಮುದಾಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಆಗ ಈ ಪ್ರದೇಶ, ಇಲ್ಲಿನ ಜನರ ಬದುಕು, ಬಡತನ, ನಿರುದ್ಯೋಗ, ಅಸ್ಪಶ್ಯತೆ, ಅಸಮಾನತೆ ಎಂದು ಕೊನೆಗೊಳ್ಳುತ್ತವೆಯೋ ಎಂಬ ಆಲೋಚನೆಗಳೇ ನನ್ನ ಸಾಹಿತ್ಯದ ಬೀಜಾಂಕುರಕ್ಕೆ ಕಾರಣವಾಯಿತು ಎಂದರು.
ನಮ್ಮ ಮುಂದೆ ಅನೇಕ ಸವಾಲುಗಳಿದ್ದು, ಅವುಗಳಿಗೆ ಪರಿಹಾರ ಸೂಚಿಸುವ ಸಾಹಿತ್ಯ ರಚನೆಯಾಗಬೇಕಿದೆ. ಜಿಲ್ಲೆ ಮೂರು ಸಾವಿರ ವರ್ಷಗಳ ಚರಿತ್ರೆಯನ್ನು ಮಡಿಲಲ್ಲಿರಿಸಿಕೊಂಡಿದೆ. ಹೈದರಾಬಾದ್ ನಿಜಾಮನ ಆಳ್ವಿಕೆ ನಮ್ಮನ್ನು ಅಧೋಗತಿಗೆ ಇಳಿಸಿತ್ತು. ಜನರ ಬದುಕಿಗೆ ಬೇಕಾದ ನೀರಾವರಿ, ಕೈಗಾರಿಕೆ, ಉದ್ಯೋಗಗಳು ಬೃಹತ್ತಾಗಿ ಬೆಳೆಯಲಿಲ್ಲ. ರಾಜ್ಯ ಏಕೀಕರಣವಾದಾಗ ಪ್ರಗತಿ ದೃಷ್ಟಿಯಿಂದ ಈ ಪ್ರದೇಶ ಹಳೆ ಮೈಸೂರಿಗಿಂತ ಸುಮಾರು 200 ವರ್ಷಗಳಿಗಿಂತ ಹಿಂದೆ ಬಿದ್ದಿತ್ತು.
ಚೈತನ್ಯರಹಿತ ನಮ್ಮ ಬದುಕಿಗೆ ಮತ್ತೊಮ್ಮೆ ಹೋರಾಟದ ದಾರಿ ಅನಿವಾರ್ಯವಾಗಿದೆ. ಜಿಲ್ಲೆಗೆ ಐಐಟಿ ಸಿಗಬೇಕೆಂಬ ಹೋರಾಟ ಮಾಡಿದಾಗ ಕ್ಷುಲ್ಲಕ ರಾಜಕಾರಣದಿಂದ ಜಿಲ್ಲೆ ಐಐಟಿಯಿಂದ ವಂಚಿತವಾಯಿತು. ಏಮ್ಸ್ ಬೇಕೆಂದು 200ಕ್ಕೂ ಹೆಚ್ಚು ದಿನಗಳಿಗಿಂತ ಸತತವಾಗಿ ಹೋರಾಟ ಮಾಡುತ್ತಿದ್ದರೂ ಫಲ ಸಿಗದಿರುವುದು ನಮ್ಮ ದೌಭಾರ್ಗ್ಯ. ಜನರಲ್ಲಿ ಹೋರಾಟದ ಕಿಚ್ಚಿದೆ. ಕೇಳುವ ಧೈರ್ಯವಿದೆ. ಆದರೆ ಆಳುವವರಲ್ಲಿ ಮಾಡುವ ಮನಸ್ಸಿಲ್ಲ. ಇದಕ್ಕೆ ಕಾರಣರಾರು ಎಂಬುದನ್ನು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.