

ಹುಕ್ಕೇರಿ: ತಾಲೂಕಿನ ಉಳ್ಳಾಗಡ್ಡಿ-ಖಾನಾಪುರ ಗ್ರಾಮಕ್ಕೆ ಜಿಪಂ ಸಿಇಒ ರಾಹುಲ್ ಶಿಂಧೆ ಈಚೆಗೆ ಭೇಟಿ ನೀಡಿ ಸ್ಥಳೀಯ ರಸ್ತೆ ನಿರ್ಮಾಣ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ರೈತರೊಂದಿಗೆ ಸ್ಥಳ ಪರಿಶೀಲಿಸಿ ಚರ್ಚೆ ನಡೆಸಿದರು.
ಪ್ರತಿ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ. ಹೀಗಾಗಿ, ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ರಸ್ತೆ ನಿರ್ಮಾಣಕ್ಕೆ ರೈತರು ಅಡೆತಡೆ ಮಾಡದೆ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಜತೆಗೆ ಕಾಮಗಾರಿ ಕೈಗೊಳ್ಳಲು ಎಲ್ಲರೂ ಸೇರಿ ಒಪ್ಪಿಗೆ ಪತ್ರ ನೀಡುವಂತೆ ತಿಳಿಸಿದರು.
ಬಳಿಕ ಇಲ್ಲಿನ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿದ ಜಿಪಂ ಸಿಇಒ ಶಿಂಧೆ, ಗ್ರಂಥಾಲಯದಲ್ಲಿನ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತಷ್ಟು ಪುಸಕ್ತ ಒದಗಿಸುವಂತೆ ಸೂಚಿಸಿದರು.
ಪಿಎಂಜಿಎಸ್‌ವೈಯ ಸುಧಾರಾಣಿ, ತಾಪಂ ಇಒ ಟಿ.ಆರ್.ಮಲ್ಲಾಡದ, ಜಿಪಂ ಇಂಜಿನಿಯರಿಂಗ್ ವಿಭಾಗದ ಎಇಇ ಶಶಿಕಾಂತ ವಂದಾಳೆ, ತಾಪಂ ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಪಿಡಿಒ ವಸಂತ ಬಡಿಗೇರ ಇತರರಿದ್ದರು.