

ಲೋಕೇಶ್.ಎಂ ಐಹೊಳೆ ಜಗಳೂರು
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಬೈಪಾಸ್ ಮುಖ್ಯ ರಸ್ತೆ ವಿಸ್ತರಣೆ ಕಾರ್ಯ ದಶಕದಿಂದಲೂ ರಾಜಕೀಯ ದಾಳಕ್ಕೆ ಸಿಲುಕಿ ನಲುಗಿದೆ. ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು, ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಶುರುವಾಗಿದೆ.
ಅಧಿಕಾರಿಗಳ ಕಾರ್ಯಚಟುವಟಿಕೆಯಿಂದ ಜೆಸಿಬಿ, ಇಟಾಚಿಗಳು ಸದ್ದು ಮಾಡಲಿವೆ ಎಂಬ ವಿಷಯದಿಂದ ವ್ಯಾಪಾರಸ್ಥರು, ಮಳಿಗೆ ಮಾಲೀಕರಿಗೆ ಭಯ ಶುರುವಾಗಿದ್ದದ್ದು, ಸಾರ್ವಜನಿಕರ ಮನದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ನಮ್ಮ ಊರು ಕೂಡ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂಬ ಕನಸು ಮತ್ತೊಮ್ಮೆ ಚಿಗುರೊಡೆದಿದೆ.
ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ, ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಾದು ಹೋಗಿದೆ. ಆದರೂ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಮರಿಚೀಕೆಯಾಗಿತ್ತು. ನಿತ್ಯ ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವುದು ಪೊಲೀಸರಿಗೆ ಬಹು ದೊಡ್ಡ ಸವಾಲಾಗಿತ್ತು.
ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ಕೊಟ್ಟೂರು, ಕೂಡ್ಲಿಗಿ, ದಾವಣಗೆರೆ, ಭರಮಸಾಗರ ಸೇರಿ ಇತರ ಭಾಗಗಳಿಂದ ನಿತ್ಯ ಬಸ್, ಲಾರಿ, ಟ್ರ್ಯಾಕ್ಟರ್, ಕಾರು, ಆಟೋ ಒಳಗೊಂಡಂತೆ ಸಾವಿರಾರು ವಾಹನಗಳು ಸಂಚರಿಸುವುದು ಒಂದೇ ರಸ್ತೆಯಲ್ಲಿ. ಆದ್ದರಿಂದ ಕಿರಿಕಿರಿ ಇದ್ದೇ ಇರುತ್ತದೆ. ಒಮ್ಮೊಮ್ಮೆ ತುಂಬ ಟ್ರಾಫಿಕ್ ಸಮಸ್ಯೆಯಾಗಿ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಅಪಘಾತಕ್ಕೆ ಬಲಿ: ಸಾರ್ವಜನಿಕ ಆಸ್ಪತ್ರೆ, ಮಹಾತ್ಮಗಾಂಧಿ ಹಳೇ ವೃತ್ತ, ಎನ್ಎಂಸಿ ಹೋಟೆಲ್, ಕಲ್ಲೇಶ್ವರ ಲಾಡ್ಜ್ ಮುಂಭಾಗದಲ್ಲಿ ಹೆಚ್ಚು ಜನಸಂದಣಿ ಇರುವ ಸ್ಥಳಗಳಾಗಿವೆ. ದಾರಿಯುದ್ದಕ್ಕೂ ಬೈಕ್, ಕಾರು ರ್ಪಾಂಗ್ ಮಾಡುವುದರಿಂದ ರಸ್ತೆ ಕಿಷ್ಕಿಂದೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಪಘಾತಗಳು ನಡೆಯುತ್ತಿವೆ. ಕೆಲವು ತಿಂಗಳ ಹಿಂದೆ ಖಾಸಗಿ ಬಸ್ ಚಕ್ರಕ್ಕೆ ಬೈಕ್ ಸವಾರರಿಬ್ಬರು ಸಿಲುಕಿ ಮೃತಪಟ್ಟಿದ್ದರು. ಇದರಿಂದ ಸಾರ್ವಜನಿಕರು ಬಸ್ ಮೇಲೆ ಕಲ್ಲು ತೂರಾಟ ಮಾಡಿ ದೊಡ್ಡ ಸಂಘರ್ಷಕ್ಕೆ ತಿರುಗಿತ್ತು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದರು.
ಅಪಘಾತದಲ್ಲಿ ಮೃತಪಟ್ಟ ಬಳಿಕ ಶಾಸಕ ಬಿ.ದೇವೇಂದ್ರಪ್ಪ ಘಟನೆ ಕುರಿತು ಜಿಲ್ಲಾಡಳಿತದ ಜತೆ ರ್ಚಚಿಸಿ ರಸ್ತೆ ವಿಸ್ತರಣೆಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರು. ಅದರಂತೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಐದಾರು ತಿಂಗಳ ಹಿಂದೆ ರಸ್ತೆ ಮಾರ್ಕಿಂಗ್ ಮಾಡಿತ್ತು.
ರಸ್ತೆ ವಿಸ್ತರಣೆಗೆ ಶಾಸಕರ ದಿಟ್ಟ ಹೆಜ್ಜೆ: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದ ನಂತರ ಶಾಸಕ ಬಿ.ದೇವೇಂದ್ರಪ್ಪ ಪಟ್ಟಣದ ರಸ್ತೆ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಒಂದೂವರೆ ವರ್ಷದ ನಂತರ ಕೆಲಸ ಶುರು ಮಾಡಿದ್ದಾರೆ. ರಸ್ತೆ ಮಾರ್ಕಿಂಗ್ ಮುಗಿದ ನಂತರ ನೂರಾರು ಜನರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇಂತಹ ಸಂದರ್ಭದಲ್ಲಿ ಆಡಳಿತ ವರ್ಗಕ್ಕೆ ಸರಣಿ ಸವಾಲುಗಳು ಎದುರುಗೊಳ್ಳುವುದು ಸಾಮಾನ್ಯ. ಅದರಲ್ಲೂ ರಾಜಕೀಯ ಒತ್ತಡಗಳು ಸಹಜ..!
ಎಲ್ಲ ಸವಾಲುಗಳನ್ನು ಸ್ವೀಕರಿಸಿದ ಶಾಸಕ ಬಿ.ದೇವೇಂದ್ರಪ್ಪ ಹಾಗೂ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಫೆ.28ರಂದು ಹೈಕೋರ್ಟ್ನಲ್ಲಿ ಅಡ್ವೋಕೇಟ್ ಜನರಲ್ ಅವರನ್ನು ಭೇಟಿ ಮಾಡಿ ಕಾನೂನಿನ ತೊಡಕುಗಳ ಬಗ್ಗೆ ರ್ಚಚಿಸಿದ್ದಾರೆ. ಈಗಾಗಲೇ ರಸ್ತೆ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಿಕೊಂಡಿರುವ ಕಟ್ಟಡಗಳನ್ನು ಕಡ್ಡಾಯವಾಗಿ ತೆರವುಗೊಳಿಸಲು ನಿರ್ಧರಿಸಲಾಗಿದೆ.
ಅಭಿವೃದ್ಧಿಗೆ 20 ಕೋಟಿ ಅನುದಾನ: ಬಹುತೇಕ ಜಿಲ್ಲೆ, ತಾಲೂಕು, ಹೋಬಳಿ ವ್ಯಾಪ್ತಿಯಲ್ಲೂ ರಸ್ತೆ ಅಗಲೀಕರಣವಾಗುತ್ತಿದೆ. ಜಗಳೂರು ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ಅನಿವಾರ್ಯವಾಗಿದೆ. ರಸ್ತೆ ಸಂಚಾರ ಅಡಚಣೆ, ಅಪಘಾತಗಳು, ಪಾದಚಾರಿ ಮಾರ್ಗ ಒತ್ತುವರಿ ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಜನರು ಮನವಿ ಮಾಡಿದ್ದಾರೆ. ಆದ್ದರಿಂದ ರಸ್ತೆ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದೆ.
ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಬೈಪಾಸ್ವರೆಗೂ ಎರಡು ಕಡೆ ಸಿಸಿ ರಸ್ತೆ ನಿರ್ವಣ, ಹೈಟೆಕ್ ವಿದ್ಯುತ್ ದೀಪಗಳು, ಚರಂಡಿ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕಟ್ಟಡಗಳ ತೆರವು ಕಾರ್ಯಾಚರಣೆ ಮುಗಿದ ತಕ್ಷಣವೇ ಕಾಮಗಾರಿಯನ್ನು ಅಧಿಕಾರಿಗಳು ಕೈಗೆತ್ತಿಕೊಳ್ಳಲಿದ್ದಾರೆ. ಇದರಿಂದ ಪಟ್ಟಣದ ಸೌಂದರ್ಯ ಹೆಚ್ಚಿಸಲಿದೆ. | ಬಿ.ದೇವೇಂದ್ರಪ್ಪ, ಶಾಸಕರು ಜಗಳೂರು. ಪಟ್ಟಣದ ರಸ್ತೆ ವಿಸ್ತರಣೆ ವಿಚಾರ ದಶಕಗಳಿಂದಲೂ ಚರ್ಚೆಯಲ್ಲಿದೆ. ಆದರೆ ಯಾರೂ ಕೂಡ ಇಂತಹ ದುಸ್ಸಾಹಸಕ್ಕೆ ಕೈ ಹಾಕಲಿಲ್ಲ. ಕುಂಟು ನೆಪ ಹೇಳಿಕೊಂಡು ಕಾಲ ಕಳೆದು ಹೋದರು. ಆದರೆ ಶಾಸಕ ಬಿ.ದೇವೇಂದ್ರಪ್ಪ ಮೊದಲ ಬಾರಿ ಆಯ್ಕೆಯಾದರೂ ಜನರು ಒಳಿತಿಗಾಗಿ ದೃಢ ನಿರ್ಧಾರ ತೆಗೆದುಕೊಂಡಿರುವುದು ಶ್ಲಾಘನೀಯ. | ಸತ್ಯಮೂರ್ತಿ ಗೌರಿಪುರ, ಹೋರಾಟಗಾರ