

ಅರಕೇರಾ: ಹಲವು ಬಾರಿ ಮನವಿ ಮಾಡಿದರೂ ಮೂಲ ಸೌಕರ್ಯ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸುತ್ತಿಲ್ಲ ಎಂದು ಮುಷ್ಟೂರು ಗ್ರಾಮಸ್ಥರು ಪಿಡಿಒ ಸೂಗಪ್ಪ ಖಾನಾಪುರ ಅವರನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡರು.
ಗ್ರಾಮದಲ್ಲಿನ ಸಮಸ್ಯೆಗಳನ್ನು ಪಿಡಿಒ ಸೂಗಪ್ಪಗೆ ತೋರಿಸಿದ ಗ್ರಾಮಸ್ಥರು ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಕುಡಿಯುವ ನೀರು, ಸ್ವಚ್ಛತೆ, ಶೌಚಗೃಹ ಸಮಸ್ಯೆ ನಿವಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ದೂರವಾಣಿ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ. ಕೆಲಸದ ಅವಧಿಯಲ್ಲಿ ಕಚೇರಿಯಲ್ಲಿ ಸಿಗುವುದಿಲ್ಲ. ಇದರಿಂದ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಎದುರಿಗೆ ಇರುವ ಬೋರ್‌ವೆಲ್ ಕೆಟ್ಟಿದ್ದು ದುರಸ್ತಿ ಮಾಡಿಲ್ಲ. ಇದರಿಂದಾಗಿ ಗ್ರಾಮಸ್ಥರಿಗೆ ನೀರಿನ ತೊಂದರೆಯಾಗಿದೆ. ವಡ್ಡರ ಓಣಿಯಲ್ಲಿರುವ ಬೋರ್‌ವೆಲ್‌ಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ನೀರಿನ ಸಮರ್ಪಕ ಸರಬರಾಜು ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಗ್ರಾಮದೆಲ್ಲೆಡೆ ಅಶುಚಿತ್ವ ತಾಂಡವವಾಡುತ್ತಿದೆ. ಚರಂಡಿಗಳಲ್ಲಿ ತ್ಯಾಜ್ಯ ತೆರವಿಗೆ ಕ್ರಮ ವಹಿಸಿಲ್ಲ. ಮಳೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿವೆ ಎಂದು ದೂರಿದರು.
ಇದೇ ಗ್ರಾಪಂ ವ್ಯಾಪ್ತಿಗೆ ಒಳಪಡುವ ಚಿಂತಲಕುಂಟಾ, ಶಿವಂಗಿ ಸೇರಿ ಇತರ ಹಳ್ಳಿ ಜನರು ಮೂಲ ಸೌಕರ್ಯಗಳ ಅಸಮರ್ಪಕ ನಿರ್ವಹಣೆಗೆ ಗ್ರಾಪಂ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಹಲವು ಬಾರಿ ವಾಗ್ವಾದ ನಡೆಸಿದ್ದಾರೆ. ಸಮಸ್ಯೆಗಳ ನಿವಾರಣೆಗೆ ತಾಪಂ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಆದಷ್ಟು ಬೇಗ ಸಮಸ್ಯೆಗಳನ್ನು ನಿವಾರಿಸುವುದಾಗಿ ಗ್ರಾಮಸ್ಥರಿಗೆ ಪಿಡಿಒ ಸೂಗಪ್ಪ ಖಾನಾಪುರ ಭರವಸೆ ನೀಡಿದರು.
ಜಯಕರ್ನಾಟಕ ಸಂಘಟನೆ ಗ್ರಾಮ ಘಟಕ ಅಧ್ಯಕ್ಷ ಬಸವರಾಜ, ಸಂಜೀವ, ಮುದುಕಪ್ಪ ಬೋವಿ, ನಾಗರಾಜ, ಗೌಡಪ್ಪ, ಭೀಮರಾಯ ಬೋವಿ, ಖಾಜಾಸಾಬ, ಬಸವರಾಜ ಬೋವಿ, ತಾಯಪ್ಪ ಛಲವಾದಿ ಸೇರಿದಂತೆ ಗ್ರಾಮಸ್ಥರು ಇದ್ದರು.