

ಮಂಗಳೂರು: ಮಂಗಳೂರು ವಿಶ್ವವಿದ್ಯಾಲದಲ್ಲಿ ವ್ಯಾಸಂಗ ಮಾಡಿದ ಮತ್ತು ಮಾಡುತ್ತಿರುವ 2022-23ನೇ ಸಾಲಿನ ನಂತರದ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾಲಯದಿಂದ ದೊರಕಬೇಕಾದ ಭೌತಿಕ ಅಂಶಗಳನ್ನು ಹೊಂದಿದ ಅಂಕಪಟ್ಟಿ ದೊರೆಯದೆ ಸಮಸ್ಯೆ ಉಂಟಾಗುತ್ತಿದೆ ಎಂದು ಎನ್‌ಎಸ್‌ಯುಐ ಮಂಗಳೂರು ವಿಧಾನಸಭಾ ಕ್ಷೇತ್ರ ಘಟಕ ಆರೋಪಿಸಿದೆ.
ಸಮಸ್ಯೆಯ ಬಗ್ಗೆ ಕುಲಪತಿಗಳಲ್ಲಿ ಮನವಿ ಮಾಡಿದಾಗ, ಪ್ರಸ್ತುತ ಭೌತಿಕ ಅಂಕಪಟ್ಟಿಗಳನ್ನು ನೀಡದಿರುವಂತೆ ಸರಕಾರದ ಆದೇಶವಿದೆ. ಈ ವಿಚಾರದಲ್ಲಿ ಬದಲಾವಣೆ ತರಲು ಸರಕಾರಕ್ಕೆ ಮಾತ್ರ ಸಾಧ್ಯ ಎಂದು ಅವರು ತಿಳಿಸಿದ್ದಾರೆ. ಆದರೆ ಈಗಾಗಲೇ ಸೆಮಿಸ್ಟರ್‌ವೊಂದಕ್ಕೆ 230 ರೂ.ರಂತೆ ಅಂಕಪಟ್ಟಿ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಪಾವತಿಸಿದ್ದಾರೆ. ಪ್ರತಿ ವಿದ್ಯಾರ್ಥಿಗಳಿಂದ ಶುಲ್ಕ ಭರಿಸಿಕೊಂಡ ನಂತರವೂ ಸರಿಯಾದ ಅಂಕಪಟ್ಟಿ ದೊರೆಯುತ್ತಿಲ್ಲ ಎಂದು ಮಂಗಳೂರು ವಿವಿ ವಿದ್ಯಾರ್ಥಿ ಸಲ್ಮಾನ್ ಬಂಟ್ವಾಳ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಸ್ತುತ ಅಂಕಪಟ್ಟಿಗಳನ್ನು ಸರ್ಕಾರದ ಹಲವಾರು ದಾಖಲೆಗಳನ್ನು ಹೊಂದಿರುವ/ಪಡೆದುಕೊಳ್ಳಲು ಬಳಸುವ ಡಿಜಿಲಾಕರ್ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ವಿಶ್ವವಿದ್ಯಾಲಯ ಸೂಚಿಸುತ್ತದೆ. ಆದರೆ ಈ ತಂತ್ರಜ್ಞಾನವು ಹಲವಾರು ಸಮಸ್ಯೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳಿಗೆ ಸರಿಯಾಗಿ ಅಂಕಪಟ್ಟಿಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳ ಸಂಕ್ಷಿಪ್ತ ಅಂಕಗಳು, ಭಾವಚಿತ್ರ, ಸಂಬಂಧಿಸಿದ ಅಧಿಕಾರಿಗಳ ಹಸ್ತಾಕ್ಷರ, ಪಠ್ಯ ವಿಷಯಗಳು ಮತ್ತು ಪ್ರೊಜೆಕ್ಟ್ ವಿಷಯಗಳು, ಉತ್ತೀರ್ಣ ಅನುತ್ತೀರ್ಣತೆಯ ಮಾನದಂಡಗಳನ್ನು ಹೊಂದಿಲ್ಲದ ಡಿಜಿಟಲ್ ಅಂಕಪಟ್ಟಿಗಳು ಕೇವಲ ಆನ್‌ಲೈನ್ ವ್ಯವಹಾರಗಳಿಗೆ ಸೀಮಿತವಾಗಿದೆ ಎಂಬ ಸೂಚನೆಯನ್ನು ಹೊಂದಿದೆ ಎಂದರು.
ಡಿಜಿಟಲ್ ಅಂಕಪಟ್ಟಿಯಲ್ಲಿ ನಮೂದಿಸಿರುವಂತೆ ಆ ಅಂಕಪಟ್ಟಿಗೆ ಮಾನ್ಯತೆ ಇರುವುದಿಲ್ಲ ಹಾಗೂ ವಿಶ್ವವಿದ್ಯಾಲಯದ ಅಂಕಪಟ್ಟಿಗೂ ಡಿಜಿಟಲ್ ಅಂಕಪಟ್ಟಿಗೂ ವ್ಯತ್ಯಾಸ ಇರುವ ಸಾಧ್ಯತೆ ಇದೆ ಎಂಬ ಸ್ಪಷ್ಟ ಸೂಚನೆಗಳನ್ನು ನೀಡಿರುತ್ತಾರೆ. ಇಂತಹ ಹಲವು ದೋಷಗಳನ್ನು ಒಳಗೊಂಡ ಡಿಜಿಟಲ್ ಅಂಕಪಟ್ಟಿ ಗಳನ್ನು ಯಾವುದೇ ಕಂಪನಿಗಳು ಉದ್ಯೋಗಕ್ಕೆ ಸಂಬಂಸಿದ ಪರಿಶೀಲನೆ ವೇಳೆ ಮಾನ್ಯ ಮಾಡುತ್ತಿಲ್ಲ, ವಿಶೇಷವಾಗಿ ಹೊರದೇಶಗಳಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಭೌತಿಕ ಅಂಕಪಟ್ಟಿ ಹಾಜರುಪಡಿಸುವುದು ಕಡ್ಡಾಯವಾಗಿದ್ದು ಈ ವೇಳೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇಂತಹ ತೊಡಕುಗಳು ಇರುವ ಡಿಜಿಟಲ್ ಅಂಕಪಟ್ಟಿಗಳನ್ನು ಕೊಡುವ ಬದಲು ಈ ಹಿಂದೆ ನೀಡುತ್ತಿದ್ದ ರೀತಿಯ ಭೌತಿಕ ಅಂಕಪಟ್ಟಿಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಎನ್‌ಎಸ್‌ಯುಐ ಮಂಗಳೂರು ಕ್ಷೇತ್ರದ ಅಧ್ಯಕ್ಷ ಸಾಹಿಲ್ ಮಂಚಿಲ, ಝಯಾನ್ ದೇರಳಕಟ್ಟೆ, ಲೀನ ಮಡಿಕೇರಿ, ಮಹೇಂದ್ರ ಕಳಸ, ಸುಹೈಲ್ ಉಪ್ಪಿನಂಗಡಿ ಉಪಸ್ಥಿತರಿದ್ದರು.