ಹೊರಭಾಗದ ಪರಿವರ್ತಕಗಳಿಂದ ಸಮಸ್ಯೆ: ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರಿಂದ ದೂರು

bel
Published on

ಬೆಳ್ತಂಗಡಿ: ಉಜಿರೆ ಹಾಗೂ ಆಸುಪಾಸಿನ 15ಕ್ಕಿಂತ ಅಧಿಕ ಸ್ಥಳಗಳಲ್ಲಿ ಇರುವ ವಾಣಿಜ್ಯ ಕಟ್ಟಡಗಳು ತಮ್ಮ ಜಾಗದ ವ್ಯಾಪ್ತಿಯಿಂದ ಹೊರಭಾಗದಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿ, ವಿದ್ಯುತ್ ಸಂಪರ್ಕ ಪಡೆದಿವೆ. ಇದರಿಂದ ರಸ್ತೆ ಸಂಚಾರಕ್ಕೂ ಅಡ್ಡಿಯಾಗುತ್ತಿದ್ದು, ಪರಿಶೀಲನೆ ನಡೆಸುವ ಕುರಿತು ಎರಡು ವರ್ಷಗಳ ಹಿಂದೆ ಅರ್ಜಿ ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಉಜಿರೆಯ ಬಾಲಸುಬ್ರಹ್ಮಣ್ಯ ಭಟ್ ಆರೋಪಿಸಿದರು.

ಬೆಳ್ತಂಗಡಿಯ ಮೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಉಜಿರೆ ಹಾಗೂ ಬೆಳ್ತಂಗಡಿ ಉಪ ವಿಭಾಗದ ವಿದ್ಯುತ್ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ತಕ್ಷಣ ಈ ಬಗ್ಗೆ ಸಮೀಕ್ಷೆ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸದೆ ಪರಿವರ್ತಕ ಅಳವಡಿಸಲು ಅನುಮತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಈ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಕಾರ್ಮಿಕರ ಸಮಸ್ಯೆ: ತಾಲೂಕಿನ ಹೆಚ್ಚಿನ ವಿದ್ಯುತ್ ಲೈನ್ ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿವೆ. ಇಲ್ಲಿನ ಮರಗಳ ಗೆಲ್ಲು ತೆರವುಗೊಳಿಸಲು ಅಗತ್ಯ ಇರುವಷ್ಟು ಕಾರ್ಮಿಕರನ್ನು ಮೆಸ್ಕಾಂ ವತಿಯಿಂದ ನೇಮಿಸದೆ ಪ್ರತಿ ಬಾರಿ ಸ್ಥಳೀಯರೇ ಈ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು. ಅಗತ್ಯ ಇರುವಷ್ಟು ಸಂಖ್ಯೆಯ ಕಾರ್ಮಿಕರನ್ನು ಒದಗಿಸಲು ಹಿರಿಯ ಅಧಿಕಾರಿಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದೇವೆ. ಆದರೆ ಇಲಾಖೆ ವತಿಯಿಂದ ಕಡಿಮೆ ಸಂಖ್ಯೆಯ ಕಾರ್ಮಿಕರನ್ನು ನೇಮಿಸುವ ಕಾರಣದಿಂದ ಸಮಸ್ಯೆ ಉಂಟಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಒದಗಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಪೇಟೆಗೆ ಪ್ರತ್ಯೇಕ ಫೀಡರ್: ಬೆಳ್ತಂಗಡಿ ಪಪಂ ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ ಮಾತನಾಡಿ, ಬೆಳ್ತಂಗಡಿ ಪೇಟೆಗೆ ಪ್ರತ್ಯೇಕ ಫೀಡರ್ ವ್ಯವಸ್ಥೆ ಹಾಗೂ ಭೂಗತ ಕೇಬಲ್ ಅಳವಡಿಕೆ ಆಗಬೇಕು ಎಂದರು. ಉತ್ತರಿಸಿದ ಅಧಿಕಾರಿಗಳು ಬೆಳ್ತಂಗಡಿ ಸೇತುವೆ ತನಕ ಪ್ರತ್ಯೇಕ ಫೀಡರ್ ವ್ಯವಸ್ಥೆ ಮಾಡಲು ಕ್ರಿಯಾಯೋಜನೆ ರೂಪಿಸುವುದಾಗಿ ತಿಳಿಸಿ, ಭೂಗತ ಕೇಬಲ್ ಅಳವಡಿಕೆ ದುಬಾರಿಯಾಗಿದ್ದು, ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದೆ ಎಂದರು.

ಲೋ ವೋಲ್ಟೇಜ್ ಸಮಸ್ಯೆ: ಉಜಿರೆ ಪ್ರದೇಶಕ್ಕೆ 110 ಕೆ.ವಿ ಫೀಡರ್ ವ್ಯವಸ್ಥೆಗೆ ಈಗಲೇ ಜಾಗ ಕಾದಿರಿಸಬೇಕು ಎಂಬ ಅಹವಾಲು ವ್ಯಕ್ತವಾಯಿತು. ಸಮೀಪದ ಬೆಳಾಲಿನಲ್ಲಿ 110 ಕೆವಿ ಫೀಡರ್ ನಿರ್ಮಾಣದ ಕುರಿತ ಅಧಿಸೂಚನೆ ಪ್ರಕಟಗೊಳ್ಳಲು ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದರು.
ಮಿತ್ತಬಾಗಿಲಿನ ಕೇಶವ ಫಡಕೆ ಮಾತನಾಡಿ, ಕಕ್ಕಿಂಜೆಯಿಂದ ಕುಕ್ಕಾವು ತನಕ ಪ್ರತ್ಯೇಕ ವಿದ್ಯುತ್ ಲೈನ್, ಬೆಳ್ತಂಗಡಿಯಲ್ಲಿ ಇನ್ನೊಂದು 33/11 ಕೆವಿ ಫೀಡರ್ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು. ಲಾಯಿಲ ಗ್ರಾಪಂ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ಮಾತನಾಡಿ, ಕುತ್ರೊಟ್ಟು, ಚಾಮುಂಡಿಕಲ್ಲು, ಹಂದೇವೂರು, ಪುದ್ದೊಟ್ಟು ಮೊದಲಾದ ಸ್ಥಳಗಳಲ್ಲಿ ಲೋ ವೋಲ್ಟೇಜ್ ಸಮಸ್ಯೆ ಇರುವುದಾಗಿ ತಿಳಿಸಿದರು.
ಬಂಟ್ವಾಳ ವಿಭಾಗದ ಇಇ ವೆಂಕಟೇಶ್, ಮಂಗಳೂರು ವಿಭಾಗದ ಮಂಜುನಾಥ್, ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಎಇಇ ಶಿವಶಂಕರ್, ಉಜಿರೆ ಉಪ ವಿಭಾಗದ ಕ್ಲೆಮೆಂಟ್ ಬೆಂಜಮಿನ್ ಬ್ರಾೃಗ್ಸ್ ಹಾಗೂ ವಿವಿಧ ಶಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಕೊಯ್ಯೂರಿನ ಕೇಶವ ಪೂಜಾರಿ, ಬಂದಾರಿನ ಶ್ರೀಧರ ಗೌಡ, ಕೊಕ್ಕಡದ ಕುಶಾಲಪ್ಪ ಗೌಡ, ಜಯಾನಂದ ಕೊಯ್ಯೂರು ಮತ್ತಿತರರು ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿದರು.

ಗ್ರಾಹಕರ ವಿವಿಧ ಬೇಡಿಕೆಗಳು

ಪವರ್‌ಮನ್‌ಗಳ ವರ್ಗಾವಣೆಯಾಗುತ್ತಿದ್ದು, ಹೆಚ್ಚಿನ ಪ್ರದೇಶಗಳಲ್ಲಿ ಪವರ್‌ಮನ್‌ಗಳ ಕೊರತೆ ಕಂಡು ಬರುತ್ತಿದೆ. ಇಂತಹ ಸ್ಥಳಗಳಲ್ಲಿ ತಕ್ಷಣ ಅಗತ್ಯ ಸಂಖ್ಯೆಯ ಪವರ್‌ಮನ್‌ಗಳ ನೇಮಕವಾಗಬೇಕು. ಹೊಸ ಪರಿವರ್ತಕಗಳಿಗೆ ತಕ್ಷಣ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು. ಹಳೇ ತಂತಿಗಳು ಅಲ್ಲಲ್ಲಿ ತುಂಡಾಗಿ ಬೀಳುತ್ತಿದ್ದು, ಅಪಾಯಕಾರಿ ಸನ್ನಿವೇಶ ಕಂಡು ಬರುತ್ತಿವೆ. ಇಂತಹ ಕಡೆಗಳಲ್ಲಿ ತಕ್ಷಣ ತಂತಿ ಬದಲಾವಣೆಯಾಗಬೇಕು. ಲೋ ವೋಲ್ಟೇಜ್ ಇರುವ ಪರಿಸರಗಳಲ್ಲಿ ಪರಿವರ್ತಕಗಳನ್ನು ಮೇಲ್ದರ್ಜೆಗೇರಿಸಬೇಕು. ನೆರಿಯ-ಗುರುವಾಯನಕೆರೆ ಖಾಸಗಿ ವಿದ್ಯುತ್‌ಲೈನ್‌ನಿಂದ ಬೆಂಕಿ ಕಿಡಿಗಳು ಹಾರುವುದು ಕಂಡುಬರುತ್ತಿದ್ದು, ನಿರ್ವಹಣೆ ಕುರಿತು ಮೆಸ್ಕಾಂನಿಂದ ಸೂಚನೆ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net