ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಸಮಸ್ಯೆ

7 vpt. 1
ವಿರಾಜಪೇಟೆ ನಗರದ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ವಿರಾಜಪೇಟೆ ಪುರಸಭೆ ಮತ್ತು ಪೊಲೀಸ್ ಇಲಾಖೆಯಿಂದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅನೂಪ್ ಮಾದಪ್ಪ ಮಾತನಾಡಿದರು , ದೇಚಮ್ಮ , ನಾಚಪ್ಪ , ಪ್ರಮೋದ್ , ವಾಣಿ ಇದ್ದರು.
Published on

ವಿರಾಜಪೇಟೆ: ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ನಗರದಲ್ಲಿ ವಾಹನ ದಟ್ಟಣೆ ಸಮಸ್ಯೆ ನಿರ್ಮಾಣವಾಗಿದೆ ಎಂದು ವಿರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.

ವಿರಾಜಪೇಟೆ ಪುರಸಭೆ ವತಿಯಿಂದ ಪಟ್ಟಣದ ಪುರಭವನದಲ್ಲಿ ಮಂಗಳವಾರ ವಿರಾಜಪೇಟೆ ನಗರದ ವ್ಯಾಪ್ತಿಯಲ್ಲಿನ ವಾಹನಗಳ ನಿಲುಗಡೆ ಸಮಸ್ಯೆಗಳ ಬಗ್ಗೆ ಅಧ್ಯಕ್ಷೆ ದೇಚಮ್ಮ ಅಧ್ಯಕ್ಷತೆಯಲ್ಲಿ ಪೊಲೀಸ್ ಇಲಾಖೆ ಜತೆ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

ಸುಣ್ಣದ ಬೀದಿಯಲ್ಲಿ ಸಂತೆ ದಿನ ವಾಹನ ನಿಲುಗಡೆ ಸ್ಥಳದಲ್ಲಿ ಕೆಲವು ವಾಹನಗಳನ್ನು ನಿಲ್ಲಿಸಿ ವ್ಯಾಪಾರ ನಡೆಸಲಾಗುತ್ತಿದೆ. ಇದರಿಂದ ವಾಹನ ಸವಾರರು ರಸ್ತೆಯಲ್ಲೇ ವಾಹನ ನಿಲ್ಲಿಸಿ ವ್ಯಾಪಾರಕ್ಕೆ ಮುಂದಾಗುತ್ತಿದ್ದು ಇದರಿಂದಾಗಿ ಮುಕ್ತ ವಾಹನ ಸಂಚಾರಕ್ಕೆ ತಡೆಯಾಗುತ್ತಿದೆ. ಈ ಕುರಿತು ಪುರಸಭೆ ನಿರ್ಣಯ ಕೈಗೊಳ್ಳಬೇಕು. ಬದ್ರಿಯ ಜಂಕ್ಷನ್ ಬಳಿ ಹೊರಗಿನಿಂದ ಬಂದವರಿಗೆ ಏಕಮುಖ ಸಂಚಾರದ ಅರಿವು ಮೂಡಿಸಲು ಸೂಚನಾ ಫಲಕ ಅಳವಡಿಕೆ ಸೇರಿದಂತೆ ಆಗತ್ಯ ಕಡೆ ಪುರಸಭೆ ಜತೆಗೂಡಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ಸರಕು ಇಳಿಸುವ ವಾಹನ ಬೆಳಗ್ಗೆ 9 ಗಂಟೆಯೊಳಗೆ ಅಥವಾ ಸಂಜೆ ಸರಕು ಇಳಿಸಬೇಕು. ದೊಡ್ಡಟ್ಟಿ ಚೌಕಿ ಬಳಿ ಖಾಸಗಿ ಬಸ್ ಮತ್ತು ಆಟೋದವರು ಸಹಕಾರ ನೀಡಿದರೆ ವಾಹನ ಸವಾರರ ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದರು.

ಪಟ್ಟಣದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಂದಿದ್ದು ಮಳೆ ಬಳಿಕ ರಸ್ತೆ ಕಾಮಗಾರಿ ನಡೆಯಲಿದೆ. ಸೂಚನಾ ಫಲಕ ಇತ್ಯಾದಿಗಳ ಬಗ್ಗೆ ಇಲಾಖೆ ಪುರಸಭೆ ಜತೆ ಸೇರಿ ಅಗತ್ಯ ಕ್ರಮ ಕೈಗೊಳ್ಳುತ್ತೆವೆ. ಅಪಘಾತ ವಲಯದಲ್ಲಿ ರಸ್ತೆ ಅಭಿವೃದ್ಧಿಗೆ ಪ್ರತ್ಯೇಕ ವಿಭಾಗ ಇದ್ದು ಅವರು ಅಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಲೋಕೊಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಿಂಗರಾಜು ಮಾಹಿತಿ ನೀಡಿದರು.

ಪುರಸಭೆ ಅಧ್ಯಕ್ಷೆ ದೇಚಮ್ಮ ಮಾತನಾಡಿ, ತಾಲೂಕು ಕಚೇರಿ ಮುಂಭಾಗ ಮತ್ತು ಗ್ರಂಥಾಲಯ ಎರಡು ಬದಿಯಲ್ಲಿ ವಾಹನ ನಿಲುಗಡೆಯಿಂದ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದ್ದು ಒಂದು ಕಡೆ ನಿಲುಗಡೆ ಮಾಡಿ. ಅನೇಕ ಕಡೆ ಹಳೆಯ ಉಪಯುಕ್ತವಲ್ಲದ ಸೂಚನಾ ಫಲಕ ತೆರವು ಮಾಡಲಾಗುತ್ತಿದೆ. ಗಡಿಯಾರ ಕಂಬದಿಂದ ಖಾಸಗಿ ಬಸ್ ನಿಲ್ದಾಣವರೆಗೆ ಮತ್ತು ಮೂರ್ನಾಡು ರಸ್ತೆವರೆಗೆ ರಸ್ತೆ ಬದಿ ದುಸ್ಥಿತಿಯಲ್ಲಿದ್ದು ಸದ್ಯಕ್ಕೆ ದುರಸ್ತಿ ಮಾಡುತ್ತೇವೆ. ಮುಂದೆ ಶಾಸಕರು ನೀಡಿರುವ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಸಭೆಯಲ್ಲಿ ಮುಖ್ಯವಾಗಿ ಬಹುತೇಕ ಸಾರ್ವಜನಿಕರು, ಪ್ರಮುಖರು ವಾಹನ ದಟ್ಟಣೆ ತಪ್ಪಿಸಲು ಸುಗಮ ಸಂಚಾರಕ್ಕೆ ರಸ್ತೆ ವಿಸ್ತರಣೆ ಮಾಡಬೇಕು. ಈ ನಿಟ್ಟಿನಲ್ಲಿ ಶಾಸಕರು ಕಾಳಜಿ ವಹಿಸಬೇಕು. ಗಾಂಧಿನಗರ ಗೌರಿಕೆರೆ ರಸ್ತೆಯಲ್ಲಿ ಏಕ ಮುಖಸಂಚಾರಕ್ಕೆ ಆಗ್ರಹಿಸಲಾಯಿತು.

ದೊಡ್ಡಟ್ಟಿ ಚೌಕಿಯಲ್ಲಿ ಬಸ್ ನಿಲುಗಡೆಯಿಂದ ವಾಹನಗಳಿಗೆ ತೊಂದರೆ ಬಗ್ಗೆ, ಸಂತ ಅನ್ನಮ್ಮ ಶಾಲೆ ಮುಂದೆ ರಸ್ತೆಯಲ್ಲಿ ವಾಹನ ದಟ್ಟಣೆ ತಪ್ಪಿಸಲು ಶಾಲಾ ಮೈದಾನದಲ್ಲಿ ವಾಹನ ಮತ್ತು ಆಟೋ ನಿಲುಗಡೆಗೆ ಒತ್ತಾಯ, ಮುಖ್ಯವಾಗಿ ಅಮ್ಮತ್ತಿ ರಸ್ತೆಯ ಸುಂಕದಕಟ್ಟೆಯಿಂದ ಆರ್ಜಿವರಗೆ ರಸ್ತೆ ವಿಸ್ತರಣೆ, ಈ ರಸ್ತೆಯಲ್ಲಿ ಬಸ್‌ಗಳ ವೇಗಕ್ಕೆ ಕಡಿವಾಣ ಮತ್ತು ಪಂಜರುಪೇಟೆಯಲ್ಲಿನ ಮುಖ್ಯ ರಸ್ತೆಯಲ್ಲಿ ಬಸ್ ಮತ್ತು ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು. ಫುಟ್‌ಪಾತ್ ಇದ್ದರೂ ವರ್ತಕರು ಅದರ ಮೇಲೆ ವಸ್ತುಗಳನ್ನು ಇಟ್ಟು ಜನರಿಗೆ ನಡೆದಾಡಲು ತೊಂದರೆ ಮಾಡುತ್ತಿದ್ದಾರೆ. ಕಲ್ಯಾಣ ಮಂಟಪದಲ್ಲಿ ಮದುವೆ ಇದ್ದಾಗ ಮೊಗರಗಲ್ಲಿ ಮತ್ತು ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ. ಖಾಸಗಿ ಬಸ್‌ಗಳು ಹೆಚ್ಚಿನ ಹೊತ್ತು ನಿಲ್ದಾಣದಲ್ಲಿ ನಿಲುಗಡೆಯಿಂದ ಸಮಸ್ಯೆ ಕುರಿತು ಪ್ರಸ್ತಾಪಿಸಿದರು.

ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಶಶಿಧರನ್, ಪುರಸಭೆ ನಾಮಕರಣ ಸದಸ್ಯ ಶಬರೀಶ್ ಶೆಟ್ಟಿ , ಶಾಹುಲ್ ಹಮೀದ್ ಪುರಸಭ ಸದಸ್ಯರಾದ ಪ್ರಥ್ವಿನಾಥ್, ರಾಜೇಶ್, ರಂಜಿಪೂಣಚ್ಚ, ಮಹ್ಮದ್‌ರಾಪಿ , ಅನಿತಾ,ಷ ಬಸ್ ಮಾಲೀಕರಾದ ಕೆ ಗಣೇಶ್ ತಮ್ಮಯ್ಯ ಸೇರಿದಂತೆ ಅನೇಕ ಸಾರ್ವಜನಿಕರು ವಾಹನ ನಿಲುಗಡೆ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಪುರಸಭೆ ಕಾರ್ಯನಿರ್ವಾಹಣಧಿಕಾರಿ ನಾಚಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಮತ್ತು ಜಲೀಲ್ ನಗರ ಠಾಣಾಧಿಕಾರಿ ಪ್ರಮೋದ್, ಗ್ರಾಮಾಂತರ ಠಾಣಧಿಕಾರಿ ವಾಣಿ, ಉಪನಿರೀಕ್ಷಕಿ ಲತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net