ಮನೆಮುಂದೆ ಅಪಾಯಕಾರಿ ಹೊಂಡ

Pipeline
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿಯಿಂದ ಜಕ್ರಿಬೆಟ್ಟುವರೆಗೆ ಎಂಆರ್‌ಪಿಎಲ್ ಸಂಸ್ಥೆಯ ಪೈಪ್‌ಲೈನ್ ಸ್ಥಳಾಂತರ ಕಾಮಗಾರಿ ವೇಳೆ ಅಲ್ಲಲ್ಲಿ ತೋಡಿದ ಹೊಂಡಗಳನ್ನು ಮುಚ್ಚದೆ ಬಿಟ್ಟಿದ್ದು, ಅಪಾಯಕಾರಿಯಾಗಿದೆ.

ಕಾಂಕ್ರಿಟ್ ರಸ್ತೆಗಳನ್ನು ತುಂಡರಿಸಿ ಪೈಪ್‌ಲೈನ್ ಹಾಕಿದ ಬಳಿಕ ರಸ್ತೆ ಪುನಃ ನಿರ್ಮಿಸಿಕೊಡದೆ ಅರ್ಧದಲ್ಲೇ ಬಿಡಲಾಗಿದೆ. ಇದರಿಂದಾಗಿ ಇಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಹೊಸ್ಮಾರ್ ಎಂಬಲ್ಲಿ ಪೈಪ್ ಅಳವಡಿಕೆಗಾಗಿ ಹೆದ್ದಾರಿಯ ಪಕ್ಕದಲ್ಲೇ ದೊಡ್ಡ ಹೊಂಡ ತೋಡಿಬಿಟ್ಟಿದ್ದಾರೆ. ಇದರ ಪಕ್ಕದಲ್ಲೇ ಪರಿಸರದ ಮನೆಗಳಿಗೆ ಸಂಪರ್ಕ ರಸ್ತೆ ಇದ್ದು, ಆಕಸ್ಮಾತ್ ಆಯ ತಪ್ಪಿ ಬಿದ್ದರೆ ಅಪಾಯ ಖಂಡಿತ. ಇತ್ತೀಚೆಗೆ ನಾಯಿಯೊಂದು ಹೊಂಡದಲ್ಲಿ ಸತ್ತು ಬಿದ್ದಿದ್ದು, ತೆಗೆಯಲು ಸಾಧ್ಯವಾಗದೆ ದುರ್ವಾಸನೆ ಬೀರುತ್ತಿತ್ತು. ಹೊಂಡ ತೋಡಿ ಮೂರು ತಿಂಗಳು ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎನ್ನುತ್ತಾರೆ ಸ್ಥಳೀಯರು.

ಇಲ್ಲಿನ ಮನೆಗಳ ಮುಂಭಾಗ ಭೂಮಿಯ ಮೇಲ್ಭಾಗದಿಂದಲೇ ಪೈಪ್ ಅಳವಡಿಸಲಾಗಿದ್ದು, ಮನೆ ಸಂಪರ್ಕಕ್ಕಿದ್ದ ರಸ್ತೆ ಇಲ್ಲದಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕ ಮನೆ ಇದ್ದರೂ ಮನೆಯಂಗಳಕ್ಕೆ ವಾಹನಗಳನ್ನು ಕೊಂಡು ಹೋಗಲಾಗದ ಸ್ಥಿತಿ.

ಕಾಮಗಾರಿ ಬಳಿಕ ಮನೆ ಸಂಪರ್ಕಕ್ಕೆ ಕಾಂಕ್ರಿಟ್ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದವರು ಮತ್ತೆ ಈ ಕಡೆ ಸುಳಿದಿಲ್ಲ. ಚರಂಡಿ ಇಲ್ಲದೆ ಮಳೆನೀರು ಮನೆ ಮುಂದೆ ಸಂಗ್ರಹಗೊಂಡು ಸೊಳ್ಳೆ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟಂತಿದೆ. ಸಮಸ್ಯೆಗಳನ್ನು ಸ್ಥಳೀಯ ನಿವಾಸಿ ಜಗದೀಶ್ ಎಂಬುವರು ಈ ಮೇಲ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದರೂ ಸ್ಪಂದನೆ ಸಿಕ್ಕಿಲ್ಲ.

ರಸ್ತೆ ಕಬಳಿಸಿದ ಹೊಂಡ: ಮುಗ್ದಲ್‌ಗುಡ್ಡೆ ಎಂಬಲ್ಲಿನ ಮನೆಗಳಿಗೆ ಸಂಪರ್ಕಿಸುವ ಕಾಂಕ್ರಿಟ್ ರಸ್ತೆಯನ್ನು ತುಂಡರಿಸಿ ಪೈಪ್ ಅಳವಡಿಸಲಾಗಿದೆ. ಆದರೆ ಆ ಬಳಿಕ ಹೊಂಡವನ್ನೂ ಮುಚ್ಚಿಲ್ಲ, ರಸ್ತೆಯನ್ನೂ ಪುನಃ ನಿರ್ಮಿಸಿಲ್ಲ.

ಗೋಡೆಗಳಲ್ಲಿ ಬಿರುಕು: ಪೈಪ್‌ಲೈನ್‌ಗಾಗಿ ಹೊಂಡ ನಿರ್ಮಿಸುವ ವೇಳೆ ಸ್ಫೋಟಕ ಬಳಸಿ ಬಂಡೆ ಒಡೆದ ಪರಿಣಾಮ ಸ್ಥಳಿಯ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಡಿದೆ ಎನ್ನುವ ದೂರುಗಳು ಕೇಳಿಬಂದಿದೆ. ಲೆಕ್ಕೆಸಿರಿಪಾದೆ ಎಂಬಲ್ಲಿ ಶ್ರೀಹರಿ ಎಂಬುವರ ಆರ್‌ಸಿಸಿ ಮನೆ ಹಾಗೂ ಸುಧಾಕರ ಎಂಬುವರ ಹೆಂಚಿನ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಿರುಕು ಸರಿಪಡಿಸಿ ಕೊಡುವುದಾಗಿ ಹೇಳಿದ ಅಧಿಕಾರಿಗಳು ಮರೆತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪಕ್ಕವೇ ನಮ್ಮ ಮನೆಯಿದ್ದರೂ ಪೈಪ್‌ಲೈನ್ ಅಪೂರ್ಣ ಕಾಮಗಾರಿಯಿಂದಾಗಿ ಮನೆಯಂಗಳಕ್ಕೆ ವಾಹನವನ್ನು ತರಲು ಸಾಧ್ಯಗುತ್ತಿಲ್ಲ. ಹಲವು ಬಾರಿ ಮನವಿ ಮಾಡಿಕೊಂಡರೂ ಸಮಸ್ಯೆ ಪರಿಹಾರವಾಗಿಲ್ಲ.
-ಜಗದೀಶ್ ಹೊಸ್ಮಾರ್, ಸ್ಥಳೀಯರು

ಪೈಪ್ ಅಳವಡಿಸಲು ಕಾಂಕ್ರಿಟ್ ರಸ್ತೆಯನ್ನು ಕಬಳಿಸಿ ಹೊಂಡ ಮಾಡಲಾಗಿದೆ. ಬಳಿಕ ಹೊಂಡ ಮುಚ್ಚದೆ ಬಿಡಲಾಗಿದೆ. ಮನೆಯಲ್ಲಿ ಹಿರಿಯ ನಾಗರಿಕರಿದ್ದು, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕೊಂಡು ಹೋಗಲು ಕಷ್ಟವಾಗುತ್ತಿದೆ.
-ದಯಾನಂದ ಮುಗ್ದಾಲ್‌ಗುಡ್ಡೆ, ಸ್ಥಳೀಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net