

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇಶದೆಲ್ಲೆಡೆ ಆ.29 ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ದೇಶದ ಪ್ರತಿ ನಾಕರಿಕರೂ ಶುಕ್ರವಾರ ಒಂದು ಗಂಟೆ ಕಾಲ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಕರೆ ನೀಡಿ ಕ್ರೀಡಾದಿನದ ಸಂಭ್ರಮ ಇಮ್ಮಡಿಗೊಳಿಸುವಂತೆ ಮನವಿ ಮಾಡಿದ್ದಾರೆ ಆದರೆ ದೇವನಹಳ್ಳಿಯಲ್ಲಿನ ಒಳಾಂಗಣ ಕ್ರೀಡಾಂಗಣದ ಸ್ಥಿತಿ ನೋಡಿ ಸ್ಥಳೀಯ ಕ್ರೀಡಾಪಟುಗಳು ಕ್ರೀಡಾದಿನವನ್ನು ದುಃಖದಿಂದ ಆಚರಿಸುವಂತಾಗಿದೆ.
ಹೌದು..!ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿನ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಹಿಡಿದಿರುವ ಗ್ರಹಣ ಬಿಡುವ ಲಕ್ಷಣ ಕಾಣುತ್ತಿಲ್ಲ. ಕಳೆದ ಮೂರುವರೆ ವರ್ಷದಿಂದ ಅರೆಬರೆ ಕಾಮಗಾರಿಯೊಂದಿಗೆ ಕ್ರೀಡಾಂಗಣದ ಕಟ್ಟಡ ಅನಾಥವಾಗಿ ಬಿದ್ದಿದೆ. ಅಕ್ರಮ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತಿದ್ದು ಕ್ರೀಡಾಪಟುಗಳ ಮನೋಸ್ಥೈರ್ಯ ಕುಸಿಯುವಂತೆ ಮಾಡಿದೆ.
ಹಾಕಿ ಮಾಂತ್ರಿಕ ಮೇಯರ್ ಧ್ಯಾನ್‌ಚಂದ್ ಅವರ ಜನ್ಮದಿನದ ಹಿಲ್ಲೆಯಲ್ಲಿ ಪ್ರತಿ ವರ್ಷ ಆ.29ರಂದು ರಾಷ್ಟ್ರೀಯ ಕ್ರೀಡಾದಿನ ಆಚರಿಸುವುದು ವಾಡಿಕೆ. ಅದೇ ರೀತಿ ಈ ಬಾರಿಯೂ ಎಲ್ಲೆಡೆ ಕ್ರೀಡಾದಿನ ಆಚರಿಸಲಾಗಿದೆ. ಆದರೆ ಗ್ರಾಮಾಂತರ ಜಿಲ್ಲೆಯ ಕ್ರೀಡಾಪಟುಗಳು ಇದರ ಸಂಭ್ರಮ ಪಡುವ ಭಾಗ್ಯವಿಲ್ಲದಂತಾಗಿದೆ. ಇದು ಜಿಲ್ಲೆಯಲ್ಲಿ ಕ್ರೀಡಾಸಕ್ತರಿಗೆ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಆಕ್ಷೇಪಕ್ಕೆ ಸಾಕ್ಷಿಯಾಗಿದೆ.
ಅಪೂರ್ಣ ಕಾಮಗಾರಿ: 2021-22ರಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಅಂದಾಜು 70 ಲಕ್ಷ ರೂ.ವೆಚ್ಚದ ಕಾಮಗಾರಿಗೆ ಅಂದಿನ ಜಿಲ್ಲಾ ಪಂಚಾಯಿತಿ ವತಿಯಿಂದ ಚಾಲನೆ ನೀಡಲಾಗಿತ್ತು. ಸುಮಾರು 47.50 ಲಕ್ಷ ರೂ.ವೆಚ್ಚದ ಕಾಮಗಾರಿ ಮುಗಿದಿದೆ ಎನ್ನಲಾಗಿದ್ದು, ಬಾಕಿ ಕಾಮಗಾರಿಗೆ ಅನುದಾನದ ಕೊರತೆ ಎದುರಾಗಿದೆ. ಕಟ್ಟಡ ಹಾಗೂ ಹೊರಭಾಗದ ಸಿಮೇಂಟ್ ಪ್ಲಾಸ್ಟಿಂಗ್ ಹಾಗೂ ಮೇಲ್ಚಾವಣೆ ಕಾಮಗಾರಿ ಮುಗಿದಿದೆ. ಇನ್ನು ಒಳಗೆ ಸಿಮೆಂಟ್ ಪ್ಲಾಸ್ಟಿಂಗ್, ಶೌಚಗೃಹ, ಪ್ಲೋರಿಂಗ್, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಸೇರಿ ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ.
ಕೋವಿಡ್ ವೇಳೆ ಅನುದಾನ:
2021ರಲ್ಲಿ ಕೋವಿಡ್ ಸಂದರ್ಭದಲ್ಲಿ ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವಿವಿಧ ಯೋಜನೆಗಳ ಅನುದಾನವನ್ನು ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದೆ. ಈ ವೇಳೆ ಯಾವುದೇ ಕಾರ್ಯಕ್ರಮಗಳು ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅನುದಾನವನ್ನು ಇದಕ್ಕೆ ಬಳಸಲಾಗಿದೆ ಎನ್ನಲಾಗಿದೆ. ಆದರೆ ಆದಾದ ಬಳಿಕ ಇಲಾಖೆಯಿಂದ ಅನೇಕ ಕಾರ್ಯಕ್ರಮಗಳು ಅನುಷ್ಟಾನಗೊಳ್ಳುತ್ತಿದ್ದು ಕಟ್ಟಡ ಕಾಮಗಾರಿಗೆ ಅನುದಾನ ಬಳಸಲು ಸಾಧ್ಯವಾಗಿಲ್ಲ. ಆದ್ದರಿಂದ ರಾಜ್ಯ ಯುವ ಜನ ಸಬಲೀಕರಣ ಮತ್ತು ಕ್ರೀಡಾಇಲಾಖೆ ಕೇಂದ್ರ ಕಚೇರಿಯಿಂದ ಅನುದಾನ ಬಿಡುಗಡೆಯಾದರೆ ಕಾಮಗಾರಿ ಪೂರ್ಣಗೊಂಡು ಕ್ರೀಡಾಪಟುಗಳಿಗೆ ಆಸರೆಯಾಗಲಿದೆ ಎಂಬ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಈ ಕ್ರೀಡಾಂಗಣ ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೇಂದ್ರ ಕಚೇರಿಯಿಂದ ಅನುದಾನ ಎದುರು ನೋಡುತ್ತಿದೆ.
ಅಕ್ರಮ ಚಟುವಟಿಕೆ ತಾಣ: ಗ್ರಾಮೀಣ ಕ್ರೀಡಾಪಟುಗಳ ಸಾಧನೆಗೆ ಉತ್ತಮ ಮೆಟ್ಟಿಲಾಗಲಿ ಎಂಬ ಸದುದ್ದೇಶದಿಂದ ಚಾಲನೆಗೊಂಡ ಒಳಾಂಗಣ ಕ್ರೀಡಾಂಗಣದ ಕಟ್ಟಡ ಪ್ರಸ್ತುತ ಅಕ್ರಮ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತಿದೆ. ಅಪೂರ್ಣಗೊಂಡಿರುವ ಕಟ್ಟಡದಲ್ಲಿ ಸ್ಥಳೀಯ ಪುಂಡರು ಸೇರಿ ಮದ್ಯಪಾನ, ಧೂಮಪಾನ ಸೇರಿ ಇನ್ನಿತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕಟ್ಟಡದ ಹೊರಗೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮದ್ಯದ ಬಾಟಲಿಗಳು, ಸಿಗರೇಟ್ ತುಂಡುಗಳು ಚೆಲ್ಲಿದ್ದು ಕ್ರೀಡಾಪಟುಗಳಿಗೆ ಇರುಸುಮುರಿಸು ತರಿಸುತ್ತಿದೆ.
ಕಾಮಗಾರಿ ಆರಂಭದಲ್ಲೇ ಇಷ್ಟೊಂದು ಅಡೆತಡೆಗಳು ಎದುರಾದರೆ ಕಾಮಗಾರಿ ಮುಗಿಯುವುದು ಯಾವಾಗ? ಕ್ರೀಡಾಂಗಣದ ಕ್ರೀಡಾಪಟುಗಳ ಬಳಕೆಗೆ ಸಿಗುವುದು ಯಾವಾಗ? ಇಲ್ಲಿನ ಲಕ್ಷಣ ನೋಡುತ್ತಿದ್ದರೆ ಕ್ರೀಡಾಂಗಣದ ಕನಸು ಕನಸಾಗಿಯೆ ಉಳಿಯುವುದೇನೋ ಎಂಬ ಅನುಮಾನ ಬರುತ್ತಿದೆ.
ಮಲ್ಲಿಕಾರ್ಜುನಯ್ಯ, ದೇವನಹಳ್ಳಿ ನಿವಾಸಿ
ಕಳೆದ ಮೂರು ವರ್ಷದ ಹಿಂದೆ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಆರಂಭವಾಯಿತು. ಇದರಿಂದ ನಮ್ಮಂಥ ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತುಂಬಾ ಸಂತೋಷವಾಯಿತು. ಆದರೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಇದರಿಂದ ಬಹಳ ನಿರಾಸೆಯಾಗಿದೆ. ಗ್ರಾಮೀಣ ಕ್ರೀಡಾಪಟುಗಳ ಸಾಧನೆಗೆ ಇಂಥ ಕ್ರೀಡಾಂಗಣಗಳ ಅವಶ್ಯಕತೆ ಬಹಳ ಇದೆ.
ಯತೀಶ್, ಕಬಡ್ಡಿ ಕ್ರೀಡಾಪಟು ದೇವನಹಳ್ಳಿ