

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೆಲಮಂಗಲ ತಾಲೂಕು ವ್ಯಾಪ್ತಿಯ ನೆಲಮಂಗಲ ದೊಡ್ಡಬಳ್ಳಾಪುರ ಸಂಪರ್ಕ ರಸ್ತೆಯಾಗಿರುವ ರೈಲ್ವೇಗೊಳ್ಳಹಳ್ಳಿ ಗೇಟ್ ಬಳಿ ಹದಗೆಟ್ಟ ರಸ್ತೆಯಿಂದ ದಿನನಿತ್ಯ ವಾಹನ ಸವಾರರು ಪರದಾಡುವಂತಾಗಿದೆ.
ಗಂಟೆಗಟ್ಟಲೆ ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕುವ ವಾಹನ ಸವಾರರು ನೆಲಮಂಗಲ ಅಥವಾ ದೊಡ್ಡಬಳ್ಳಾಪುರ ತಲುಪಲು ಹರಸಾಹಸ ನಡೆಸಬೇಕಾಗಿದೆ. ಇಲ್ಲಿ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು 10 ಚಕ್ರದ ದೊಡ್ಡ ಲಾರಿಗಳು ಸೇರಿ ಬಸ್ ಮತ್ತಿತರ ವಾಹನಗಳ ಸಂಚಾರ ದುಸ್ತರವಾಗಿದೆ. ಇವುಗಳ ಮಧ್ಯೆ ಕಾರು, ದ್ವಿಚಕ್ರದಂತ ವಾಹನಗಳು ಸಂಚರಿಸುವುದು ದೊಡ್ಡ ಸಾಹಸದಂತಾಗಿದೆ. ಹಲವು ವೇಳೆ ದೊಡ್ಡ ವಾಹನಗಳಿಗೆ ಸಿಲುಕಿ ದ್ವಿಚಕ್ರವಾಹನ ಸವಾರರು ಗಾಯಗೊಳ್ಳುವ ಸನ್ನಿವೇಶಗಳು ಕಂಡುಬರುತ್ತಿವೆ.
10 ವರ್ಷದಿಂದ ಸಮಸ್ಯೆ: ಸುಮಾರು 10 ವರ್ಷದಿಂದ ಈ ಭಾಗದಲ್ಲಿ ರಸ್ತೆ ಸಮಸ್ಯೆ ಜೀವಂತವಾಗಿದ್ದು ಶಾಶ್ವತ ಪರಿಹಾರ ಸಿಕ್ಕಿಲ್ಲ. ಡಬಲ್‌ರೋಡ್ ನಿರ್ಮಾಣವಾದರೂ ಸರ್ವಿಸ್ ರಸ್ತೆಯಿಲ್ಲದೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿಗಳಿಂದ ಬರುವ ವಾಹನಗಳು ಈ ಭಾಗದಲ್ಲಿ ತಿರುವು ಪಡೆಯಲು ಪರದಾಡುವಂತಾಗಿದೆ. ಟಿಪ್ಪರ್ ಲಾರಿಗಳು, 10 ವೀಲ್ ಲಾರಿಗಳು ಸೇತುವೆ ಬಳಿ ತಿರುವು ಪಡೆಯುವ ವೇಳೆ ಟ್ರಾಫಿಕ್‌ಜಾಮ್ ಆಗುತ್ತಿದೆ. ಅಲ್ಲದೆ ಗುಂಡಿಬಿದ್ದ ರಸ್ತೆಯಲ್ಲಿ ವಾಹನಗಳು ಕುಪ್ಪಳಿಸುತ್ತಾ ತೆರಳುವುದರಿಂದ ವಾಹನದಟ್ಟಣೆ ಏರ್ಪಡುತ್ತಿದೆ. ಈ ಭಾಗದಲ್ಲಿ ಯಾವುದಾದರೂ ವಾಹನ ಕೆಟ್ಟುನಿಂತರೆ ದಿನಗಟ್ಟಲೆ ವಾಹನ ಸವಾರರು ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕು ನರಳುವಂತಾಗುತ್ತದೆ.
ರಸ್ತೆ ಬದಿ ವಾಹನಗಳ ನಿಲುಗಡೆ: ಇನ್ನು ಈ ರಸ್ತೆ ಮುಂದುವರೆದಂತೆ ಬಸವನಹಳ್ಳಿ, ರೇಣುಕಾನಗರ ವ್ಯಾಪ್ತಿಯಲ್ಲಿ ರಸ್ತೆಯ ಎರಡೂ ಕಡೆ ಲಾರಿ ಸೇರಿ ಹಲವು ವಾಹನಗಳ ನಿಲುಗಡೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ರೈಲ್ವೇಗೊಳ್ಳಹಳ್ಳಿ ಗೇಟ್ ಸೇರಿ ನೆಲಮಂಗಲ ಸೇರುವ ರಸ್ತೆಯಲ್ಲಿ ಎಷ್ಟೇ ವಾಹನದಟ್ಟನೆ ಏರ್ಪಟ್ಟರು ಈ ಭಾಗದಲ್ಲಿ ಸಂಚಾರ ಪೊಲೀಸರು ಸುಳಿಯುವುದಿಲ್ಲ. ಬಸ್ ಅಥವಾ ಇನ್ನಿತರ ವಾಹನ ಸವಾರರು ವಾಹನಗಳಿಂದ ಇಳಿದು ಟ್ರಾಫಿಕ್ ಕ್ಲಿಯರ್ ಮಾಡುವ ದೃಶ್ಯಗಳು ಕಂಡುಬರುತ್ತಿವೆ.
ಪಾದಚಾರಿಗಳಿಗೂ ಸಂಕಷ್ಟ: ಗುಂಡಿಬಿದ್ದ ರಸ್ತೆಗಳಲ್ಲಿ ಮಳೆಗಾಲದಲ್ಲಿ ನೀರು ಹರಿದು ಕೆಸರುಗದ್ದೆಯಂತಾಗುತ್ತದೆ, ವಾಹನ ಸವಾರರಲ್ಲದೇ ಈ ಭಾಗದಲ್ಲಿ ಸಂಚರಿಸುವ ಪಾದಚಾರಿಗಳಿಗೂ ಸಂಕಷ್ಟ ಎದುರಾಗುತ್ತದೆ, ವಾಹನಗಳ ನಡುವೆ ತೂರಿಕೊಂಡು ಗಮ್ಯ ಸೇರಬೇಕಾದ ಪಾದಚಾರಿಗಳು ಜೀವನನ್ನು ಮುಷ್ಟಿಯಲ್ಲಿ ಹಿಡಿದು ಸಾಗಬೇಕಿದೆ. ಕೆಸರುಗದ್ದೆಯಾದ ರಸ್ತೆಯಲ್ಲಿ ವಾಹನಗಳಿಂದ ಚಿಮ್ಮುವ ಕೆಸರು ಪಾದಚಾರಿಗಳಿಗೆ ಎಗರುತ್ತದೆ ಅಲ್ಲದೆ ದ್ವಿಚಕ್ರವಾಹನ ಸವಾರರು ಆಯತಪ್ಪಿ ಬೀಳುವ ಸನ್ನಿವೇಶಗಳು ಸಾಮಾನ್ಯವಾಗಿವೆ.
ಗುಂಡಿಮುಚ್ಚಲು ದೊಡ್ಡಕಲ್ಲುಗಳು:
ಇನ್ನು ಈ ರಸ್ತೆಯಲ್ಲಿನ ದೊಡ್ಡ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ದೊಡ್ಡಗಾತ್ರದ ಜಲ್ಲಿಕಲ್ಲು ಸೇರಿ ಸಣ್ಣಪುಟ್ಟ ಬಂಡೆಗಾತ್ರದ ಕಲ್ಲುಗಳನ್ನು ಸುರಿದಿರುವುದು ಇನ್ನಷ್ಟು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ದ್ವಿಚಕ್ರವಾಹನ ಸವಾರರು ಗುಂಡಿಯಲ್ಲಿನ ಕಲ್ಲುಗಳಿಂದ ಆಯತಪ್ಪಿ ಬೀಳುವಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ರೈಲ್ವೇಗೊಲ್ಲಹಳ್ಳಿ ಗೇಟ್ ದಾಟುವುದು ಎಂದರೆ ದೊಡ್ಡ ಸಾಹಸವೇ ಸರಿ. ಈ ಭಾಗದಲ್ಲಿ ರಸ್ತೆ ದುರಸ್ತಿ ಕಂಡು ಎಷ್ಟೋ ವರ್ಷವಾಗಿದೆ. ಇಲ್ಲಿನ ಮೇಲ್ಸೆತುವ ಕಾಮಗಾರಿ ವಿಳಂಭದಿಂದ ಸಾಕಷ್ಟು ತೊಂದರೆ ಎದುರಾಗಿದೆ. ವಾಹನಟ್ಟಣೆ ಸಾಮಾನ್ಯ ಎನ್ನುವಂತಾಗಿದೆ ತಡರಾತ್ರಿಯಾದರೂ ಈ ಭಾಗದಲ್ಲಿ ವಾಹನದಟ್ಟಣೆ ಸರಿಹೋಗುವುದಿಲ್ಲ. ವಾಹನ ಸವಾರರು ದಿನನಿತ್ಯ ಪರದಾಡುವಂತಾಗಿದ್ದು ಸಂಬಂಧಪಟ್ಟವರು ರಸ್ತೆ ದುರಸ್ತಿ ಬಗ್ಗೆ ಗಮನಹರಿಸಬೇಕಿದೆ.
ನಾರಾಯಣಪ್ಪ, ನೆಲಮಂಗಲ ನಿವಾಸಿ