ವರಮಾನವಿದ್ದರೂ ಅಭಿವೃದ್ಧಿ ಇಲ್ಲ

charantdi
?????????????
Published on

 ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ

ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಹೋನ್ನೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರಗೇನಹಳ್ಳಿ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆ ಕಾಡುತ್ತಿದ್ದು ಸಾರ್ವಜನಿಕರು ಸಾಂಕ್ರಾಮಿಕ ರೋಗ ಭೀತಿ ಎದುರಿಸುವಂತಾಗಿದೆ.

ನೆಲಮಂಗಲ ತಾಲೂಕಿನಲ್ಲಿಯೇ ಅತಿ ಹೆಚ್ಚು ಆದಾಯ ಬರುವ ಹೋನ್ನೇನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಕೆಲಸಗಳಿಗೆ ಮಾತ್ರ ಹಣ ಖರ್ಚು ಮಾಡಲು ಮೀನಮೇಷ ಎಣಿಸುತ್ತಿದೆ. ದೇವಗಾನಹಳ್ಳಿ ರಸ್ತೆ ಹಾಗೂ ರಾಜ್ಯ ಹೆದ್ದಾರಿ ಪಕ್ಕದ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದರೂ ಇದನ್ನು ದುರಸ್ತಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಈ ಬಗ್ಗೆ ಗ್ರಾಪಂ ಸದಸ್ಯರು, ಪಿಡಿಒ ಹಾಗೂ ತಾಪಂ ಇಒ ಗಮನಕ್ಕೆ ತಂದರೂ ಇದುವರೆಗೆ ಯಾರೂ ಇತ್ತ ಕಡೆ ತಲೆಹಾಕಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಗ್ರಾಮ ಪಂಚಾಯತಿಗಳಿರುವುದು ಸಮರ್ಪಕವಾದ ನೀರಿನ ವ್ಯವಸ್ಥೆ ಕಲ್ಪಿಸುವುದಕ್ಕೆ, ಚರಂಡಿ ನಿರ್ಮಿಸಿ ಸ್ವಚ್ಛತೆ ಕಾಪಾಡುವುದಕ್ಕೆ ಆದರೆ ಇಲ್ಲಿನ ಪಂಚಾಯಿತಿ ಇವುಗಳನ್ನು ಕಡೆಗಣಿಸಿದೆ. ಬೀದಿ ದೀಪಗಳನ್ನು ಅಳಡಿಸದೆ ಕತ್ತಲಲ್ಲಿ ಗ್ರಾಮ ಮುಳುಗುವಂತಾಗಿದೆ. ಸರಿಯಾದ ಕ್ರಿಯಾ ಯೋಜನೆ ಮಾಡದೆ ಪಂಚಾಯಿತಿ ಅವರಿಗೆ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ ಇದರಿಂದ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದುರಿಸುವಂತಾಗಿದೆ.

ರೋಗ ಹರಡುವ ತಾಣವಾದ ರಸ್ತೆ: ಹೋನ್ನೇನಹಳ್ಳಿ ಗ್ರಾಮ ಪಂಚಾಯತಿ ಬರಗೇನಹಳ್ಳಿ ಗ್ರಾಮದಲ್ಲಿ 3 ಜನ ಸದಸ್ಯರಿದ್ದು ಸಮರ್ಪಕವಾದ ಸೌಕರ್ಯ ನೀಡಲು ಸಾಧ್ಯವಾಗಿಲ್ಲ. ಆದರೂ ಕೆಲವು ಕಡೆ ಚರಂಡಿ ಸ್ವಚ್ಛತೆ ಮಾಡಿರುವುದಾಗಿ ಬಿಲ್ ಮಾಡಿಕೊಳ್ಳುತ್ತಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಕೆಲವು ಕಡೆ ಚರಂಡಿಗಳನ್ನೆ ಮುಚ್ಚಲಾಗಿದೆ ಇದರಿಂದ ತ್ಯಾಜ್ಯ ನೀರು ರಸ್ತೆಗಳಲ್ಲಿ ಹರಿಯುವಂತಾಗಿದೆ. ಇದರಿಂದ ಕಾಲನಿ ಹಾಗೂ ದೇವಗಾನಹಳ್ಳಿ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದ್ದು ರೋಗ ಹರಡುವ ತಾಣವಾಗಿ ರೂಪುಗೊಂಡಿದೆ. ದೇವಗಾನಹಳ್ಳಿ ರಸ್ತೆಯಲ್ಲಿ ಸುಮಾರು 50 ಮನೆಗಳಿದ್ದು ರಸತೆಯಲ್ಲಿ ಹರಿಯುತ್ತಿರುವ ತ್ಯಾಜ್ಯ ನೀರಿನ ನಡುವೆಯೇ ಸಂಚಾರ ಮಾಡುವಂತಾಗಿದೆ.

ಸುಮಾರು 25 ವರ್ಷದಿಂದ ವಾಸವಿದ್ದೇವೆ. ನಾವುಗಳು ಗ್ರಾಮ ಪಂಚಾಯತಿಗೆ ಈ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇವೆ, ಆದರೂ ಅಧಿಕಾರಿಗಳು ಬಂದು ಇತ್ತ ಕಡೆ ನೋಡಿಲ್ಲ, ಗ್ರಾಮ ಪಂಚಾಯತಿಗೆ ತೆರಿಗೆ ನೀಡುತ್ತಿದ್ದೇವೇ ಸಮರ್ಪಕವಾದ ಚರಂಡಿ ಮಾಡಿಲ್ಲ ಎಂದರೆ ಹೇಗೆ? ಸುಮಾರು 100 ಮೀಟರ್ ಚರಂಡಿ ನಿರ್ಮಿಸಿದರೆ ಸಾಕು ನೀರಿನ ಹರಿವಿನ ಸಮಸ್ಯೆ ಬಗೆಹರಿಯುತ್ತದೆ.

ಬಿ.ಸಿ.ರಾಜಣ್ಣ, ಗ್ರಾಮಸ್ಥ

ಬರಗೇನಹಳ್ಳಿಯಲ್ಲಿ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿರುವ ಬಗ್ಗೆ ದೂರು ಬಂದಿದೆ, ಈ ಬಗ್ಗೆ ಪರಿಶೀಲಿಸಿ ಶೀಘ್ರದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಪಂಚಾಯಿತಿಗೆ ಸೂಚನೆ ನೀಡಲಾಗುವುದು, ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಸ್ವಚ್ಛತೆ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಶೀಘ್ರದಲ್ಲೇ ಕ್ರಮವಹಿಸಲಾಗುವುದು.

ಲಕ್ಷ್ಮೀನಾರಾಯಣ, ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net