ವಿವಿಧ ಬೇಡಿಕೆ ಈಡೇರಿಕೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ

DSC_0656
Published on

ತುಮಕೂರು: ಕಾರ್ಪೋರೇಟ್ ಕಂಪನಿಗಳಿಗೆ ಲಾಭಮಾಡಿಕೊಡುವ ಭೂಸ್ವಾಧೀನ, ವಿದ್ಯುತ್, ಅಗತ್ಯಸೇವೆ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಕಾರ್ಮಿಕ ಮುಖಂಡರು, ದಾದಿಯರು, ವೈದ್ಯರು, ಪೌರಕಾರ್ಮಿಕರು ಸ್ಕೀಂ ನೌಕರರಾದ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸೇವೆ ಕಾಯಂಗೊಳಿಸಬೇಕು. ಉದ್ಯೋಗ ಖಾತ್ರಿ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ವೈದ್ಯಕೀಯ ತುರ್ತುಪರಿಸ್ಥಿತಿ ಎಂದು ಘೋಷಿಸಬೇಕು, ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೆ 7500 ರೂಪಾಯಿ 6 ತಿಂಗಳು ಕೊಡಬೇಕು. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಹಾಗೂ ಇತರ ಪಡಿತರಗಳನ್ನು ಕೇರಳ ಮಾದರಿಯಲ್ಲಿ ಕೊಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಕರೊನಾ ತಡೆಗೆ ಲಾಕ್‌ಡೌನ್ ಮಾಡಿದರೂ ಈ ಪ್ರಮಾಣದಲ್ಲಿ ರೋಗ ಹರಡುತ್ತಿರುವುದನ್ನು ನೋಡಿದರೆ ಲಾಕ್‌ಡೌನ್‌ವೊಂದೇ ಪರಿಹಾರವೇ ಎಂದು ಕೇಳಿಕೊಳ್ಳಬೇಕಾಗಿದೆ. ಹಸಿವನ್ನು ಲಾಕ್‌ಡೌನ್ ಮಾಡದಿರುವ ಕಾರಣ ದುಡಿಯುವ ಜನರ, ಜಸಸಾಮಾನ್ಯರ ಮೂಲ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಎನ್‌ಟಿಯುಸಿ ಜಿಲ್ಲಾ ಮುಖಂಡರಾದ ಬಿ.ಎಚ್.ರಾಜು, ಎಐಯುಟಿಯುಸಿ ಮಂಜುಳಾ ಗೋನಾಳ್, ಎಐಟಿಯುಟಿಸಿ ಉಪಾಧ್ಯಕ್ಷ ಕಂಬೇಗೌಡ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿದರು. ಸಿಐಟಿಯು ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಗೌರಮ್ಮ, ಟಿಮೇಕ್ ಕಾರ್ಮಿಕರ ಸಂಘದ ದೀಪಕ್, ಎಐಟಿಯುಸಿಯ ನಾಗಣ್ಣ ಇದ್ದರು.

ನವರತ್ನ ಕಂಪನಿ ಖಾಸಗೀಕರಣ ಬೇಡ: ನವರತ್ನ ಕಂಪನಿಗಳನ್ನು ಖಾಸಗೀಕರಣಗೊಳಿಸಲು ಹೊರಟಿರುವುದನ್ನು ನಿಲ್ಲಿಸಬೇಕು. ಬಂಡವಾಳ ಹಿಂತೆಗೆತದಿಂದ ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡಲು ಸರ್ಕಾರ ಹೊರಟಿದೆ. ದೇಶದಲ್ಲಿ ಆರ್ಥಿಕತೆ ಕುಸಿದಿದ್ದು ಸರ್ಕಾರದ ವೈಪಲ್ಯವೇ ಇದಕ್ಕೆ ಕಾರಣವಾಗಿದೆ. ಸಣ್ಣ ಕೈಗಾರಿಕೆಗಳು ಮುಚ್ಚಿವೆ. ಜನರಿಗೆ ಉದ್ಯೋಗವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಐಯುಟಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net