

ಪಾವಗಡ: ಕರೊನಾದಿಂದ ಬಾಗಿಲು ಮುಚ್ಚಿದ್ದ ಶಾಲೆಗಳು ಮತ್ತು ವಸತಿ ನಿಲಯಗಳು ಪ್ರಾರಂಭವಾದರೂ ಅಡುಗೆ ಹಾಗೂ ಮತ್ತಿತರ ಕೆಲಸಕ್ಕೆ ಸಿಬ್ಬಂದಿಯನ್ನು ನೇಮಿಸಿಕೊಳ್ಳದಿರುವುದರಿಂದ ಈ ಕೆಲಸವನ್ನೇ ನೆಚ್ಚಿಕೊಂಡವರ ಜೀವನ ಅತಂತ್ರವಾಗಿದೆ.
ದಲಿತ, ವಿಧವಾ ಮತ್ತು ಪರೀತ್ಯಕ್ತ ಮಹಿಳೆಯರು ಹಾಗೂ ವಿದ್ಯಾವಂತ ನಿರುದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಲಾಕ್‌ಡೌನ್‌ನಿಂದ ಎಲ್ಲವೂ ಬಂದ್ ಆಗಿದ್ದರಿಂದ ಕೆಲಸವೂ ಇಲ್ಲದೆ, ವರ್ಷದಿಂದ ಸಂಬಳ ಮತ್ತು ಮತ್ತಿತರ ಸೌಲಭ್ಯಗಳಿಲ್ಲದೆ ಬದುಕು ನಡೆಸುವುದು ದುಸ್ತರವಾಗಿದೆ.
ಇಷ್ಟೇ ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಕಳೆದ 10 ವರ್ಷಗಳಿಂದ ಇಎಸ್ಐ ಮತ್ತು ಪಿಎಫ್ ಸೇರಿ ಸವಲತ್ತುಗಳನ್ನು ನೀಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಪಟ್ಟಣದ ಮಾಧ್ಯಮಿಕ ಪಾಠಶಾಲಾ ಆವರಣದ ಮೆಟ್ರಿಕ್ ನಂತರದ ಪಿಯು, ಡಿಗ್ರಿ ವಸತಿನಿಲಯದಲ್ಲಿ ಮೆಟ್ರಿಕ್ ಪೂರ್ವದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದೇ ಕಡೆ ಅಡುಗೆ ಮಾಡಿ ಬಡಿಸುತ್ತಿದ್ದು, ಈ ಎರಡು ವಸತಿನಿಲಯಗಳ ವಿದ್ಯಾರ್ಥಿಗಳಿಗೆ ಇಲ್ಲಿನ ಸಿಬ್ಬಂದಿ ಅಡುಗೆ ಮಾಡಲು ಹೈರಾಣಾಗುತ್ತಿದ್ದಾರೆ.
ಬಿಸಿಎಂ ಅಧಿಕಾರಿಯೇ ಇಲ್ಲಿ ನಿಲಯಪಾಲಕರು: ತಾಲೂಕಿನಲ್ಲಿ ಬಿಸಿಎಂ ಇಲಾಖೆಯಿಂದ ಪಟ್ಟಣವೂ ಸೇರಿ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 13 ವಸತಿನಿಲಯಗಳಿದ್ದು, ಕೇವಲ ಇಬ್ಬರು ನಿಲಯಪಾಲಕರಿದ್ದಾರೆ. ಹೊಸದಾಗಿ ಕಲ್ಯಾಣಾಧಿಕಾರಿ ಹುದ್ದೆ ಅಲಂಕರಿಸಿರುವ ವೇದಮೂರ್ತಿ ಎಂಬುವವರು 5 ವಸತಿನಿಲಯಗಳ ಉಸ್ತುವಾರಿ ವಹಿಸಿಕೊಂಡಿದ್ದು, ಇಲಾಖೆ ಕಾರ್ಯಕ್ರಮಗಳಿಗೆ ಹಾಜರಾಗುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.
ಸಮಾಜಕಲ್ಯಾಣ ಇಲಾಖೆ ನಿಲಯಪಾಲಕಿ ಶೋಭಾ ಎಂಬುವವರು ಇಲಾಖೆಯ 3 ಸೇರಿ ಬಿಸಿಎಂ ಇಲಾಖೆಯ 2 ವಸತಿನಿಲಯಗಳ ಉಸ್ತುವಾರಿ ವಹಿಸಿಕೊಂಡಿದ್ದು, ಒಬ್ಬರೇ 5 ವಸತಿನಿಲಯ ಉಸ್ತುವಾರಿ ಹೊತ್ತಿದ್ದು ಸಮರ್ಪಕ ನಿರ್ವಹಣೆ ಅಸಾಧ್ಯ ಎನ್ನಲಾಗುತ್ತಿದೆ. ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು ನಿಲಯಗಳನ್ನು ನಿರ್ವಹಣೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದ್ದು, ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಊಟ ಮತ್ತಿತರ ಸೌಲಭ್ಯ ಕಲ್ಪಿಸುವಲ್ಲಿ ಇಲಾಖೆ ವಿಲವಾಗಿರುವ ನಿದರ್ಶನಗಳು ಸಾಕಷ್ಟಿವೆ.
ಅವಶ್ಯಕತೆ ಇರುವಷ್ಟು ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸರ್ಕಾರ ಸೂಚಿಸಿದ್ದು ಅದರಂತೆ ಮಾರ್ಗಸೂಚನೆ ಪಾಲಿಸಲಾಗುತ್ತಿದೆ. ವೇದಮೂರ್ತಿ ಬಿಸಿಎಂ ಕಲ್ಯಾಣಾಧಿಕಾರಿ ನಾನು 3 ತಿಂಗಳ ಹಿಂದಷ್ಟೇ ಆಗಮಿಸಿದ್ದು, ಹೊರಗುತ್ತಿಗೆ ಪಡೆದ ಸಂಸ್ಥೆಗಳು ಇಎಸ್ಐ, ಮತ್ತು ಪಿಎಫ್ ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದು, ಶೀಘ್ರ ಕ್ರಮಕೈಗೊಳ್ಳಲಾಗುವುದು. ಶ್ರೀನಿವಾಸನಾಯ್ಕ, ಸಮಾಜ ಕಲ್ಯಾಣಾಧಿಕಾರಿ ಪಾವಗಡ