

ತುಮಕೂರು: ಭೂ ಸುಧಾರಣೆಯಿಂದ ಉಳುವವರು ಮತ್ತು ದುಡಿಯುವವರ ಭಾರತವಾಗಿದ್ದನ್ನು ಈಗ ಉಳ್ಳವರ ಭಾರತವನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ವಕೀಲ ಪ್ರೊ.ರವಿವರ್ಮಕುಮಾರ್ ಆತಂಕ ವ್ಯಕ್ತಪಡಿಸಿದರು.
ನಗರದ ಜನ ಚಳವಳಿ ಕೇಂದ್ರದಲ್ಲಿ ಭಾನುವಾರ ರಾಮಮನೋಹರ ಲೋಹಿಯಾ ಮತ್ತು ಸಮತಾ ವಿದ್ಯಾಲಯ ಟ್ರಸ್ಟ್‌ನಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೊಳಿಸಿದರು. ಪರಿಣಾಮ ಮಠ-ದೇವಾಲಯಗಳು, ದೊಡ್ಡದೊಡ್ಡ ಭೂ ಮಾಲೀಕರು, ಜಾಗೀರುದಾರರ ಬಳಿಯಿದ್ದ ಲಕ್ಷಾಂತರ ಎಕರೆ ಭೂಮಿ ಗೇಣಿದಾರರು ಮತ್ತು ಉಳುವವರಿಗೆ ಸೇರುವಂತಾಯಿತು.
ಇಂದಿರಾಗಾಂಧಿ ಅವರು ಬ್ಯಾಂಕುಗಳು, ವಿಮಾಕ್ಷೇತ್ರ, ವಿದ್ಯುಚ್ಛಕ್ತಿ ಕ್ಷೇತ್ರಗಳನ್ನು ರಾಷ್ಟ್ರೀಕರಣಗೊಳಿಸಿದರು. ರಾಜಧನ ರದ್ದುಪಡಿಸಿದರು. ಸಂವಿಧಾನದ ಆಶಯಗಳಡಿ ಕೆಲಸ ಮಾಡಿದರು. ದೇವರಾಜ ಅರಸು ಮತ್ತು ಇಂದಿರಾಗಾಂಧಿ ಕೈಗೊಂಡ ಕಾರ್ಯಗಳಿಂದ ಉಳ್ಳವರ ಭಾರತವಾಗಿದ್ದುದು ಉಳುವವರು ದುಡಿಯುವವರ ಭಾರತವಾಯಿತು ಎಂದರು.
ಸರ್ಕಾರಗಳಿಗೆ ಉತ್ತರದಾಯಿತ್ವ ಇರಬೇಕು. ಸರ್ಕಾರ ತಾನು ತೆಗೆದುಕೊಳ್ಳುವ ತೀರ್ಮಾನಕ್ಕೆ ಹೊಣೆಗಾರನಾಗಬೇಕು. ಆದರೆ ಇಂದು ಸಂವಿಧಾನ ನೋಡುತ್ತಿಲ್ಲ. ಪಾಲಿಸುತ್ತಿಲ್ಲ ಎಂದರು. ನಿವೃತ್ತ ಡಿಡಿಪಿಯು ಕೆ.ದೊರೈರಾಜ್, ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಇದ್ದರು.