ಸರ್ಕಾರದಿಂದ ಬಡವರ ಪರ ಯೋಜನೆಗಳು

web
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ಬಡವರ ಪರ ಯೋಜನೆಗಳನ್ನು ರೂಪಿಸಿದೆ. ಬಡವರ ಉದ್ಯೋಗ, ಅಭಿವೃದ್ಧಿಗಳಿಂದ ತಲಾ ಆದಾಯ ಹೆಚ್ಚುತ್ತದೆ. ಬಡವರ, ಹಿಂದುಳಿದವರ, ಅಸಹಾಯಕರ ನೆರವಿಗೆ ಸರ್ಕಾರ ಐದು ಗ್ಯಾರಂಟಿ ಯೋಜನೆ ಘೋಷಿಸಿ, ಅನುಷ್ಠಾನಕ್ಕೆ ತರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಹೇಳಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಗೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಭಾನುವಾರ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸಂತಸದ ದಿನವಾಗಿದೆ. ಚುನಾವಣೆ ಪೂರ್ವ ಘೋಷಣೆ ಮಾಡಿದ್ದ 5 ಯೋಜನೆಗಳ ಗ್ಯಾರಂಟಿ ಕಾರ್ಡ್‌ಗಳಲ್ಲಿ ಪ್ರಥಮವಾಗಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಆರಂಭಿಸುತ್ತಿದ್ದೇವೆ. ರಾಜ್ಯದಲ್ಲಿ ನಿತ್ಯ ಪ್ರಯಾಣಿಸುವ 87 ಲಕ್ಷ ಜನರಲ್ಲಿ ಅಂದಾಜು 40 ಲಕ್ಷ ಪ್ರಯಾಣಿಕರು ಮಹಿಳೆಯರಾಗಿದ್ದಾರೆ. ಇವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಉಚಿತ ಪ್ರಯಾಣ ಸೇವೆ ನೀಡಿದೆ ಎಂದರು.
ಬಿಜೆಪಿ ನಮ್ಮ ಯೋಜನೆಗಳ ಬಗ್ಗೆ ಟೀಕಿಸುತ್ತಿದೆ. ಆದರೆ ಜನ ಹೆದರಬೇಕಿಲ್ಲ. ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ. ಇವುಗಳಿಗೆ 60 ಸಾವಿರ ಕೋಟಿ ರೂ. ಬೇಕು. ಇದಕ್ಕೆ ಹಣ ಎಲ್ಲಿಂದ ತರುತ್ತಾರೆ? ಎಂಬ ಪ್ರಶ್ನೆ ಇದೆ. ಸಿದ್ದರಾಮಯ್ಯ ಕೈಯಲ್ಲಿ ಸರ್ಕಾರ ಇದೆ. 60 ಸಾವಿರ ಕೋಟಿ ರೂ. ಅಲ್ಲ. 80 ಸಾವಿರ ಕೋಟಿ ರೂ. ಆದರೂ ಯೋಜನೆ ಜಾರಿಗೆ ತರುತ್ತಾರೆ. ನಾವು ಜನರಿಗೆ ನೀಡುವ ಹಣ ಪುನಃ ಮಾರುಕಟ್ಟೆಗೆ ಬರುವುದರಿಂದ ರಾಜ್ಯದ ಜೆಡಿಪಿ ಬೆಳೆಯುತ್ತದೆ. ನರೇಗಾ ಯೋಜನೆಗೂ ನರೇಂದ್ರ ಮೋದಿ ಟೀಕಿಸಿದ್ದರು. ಆದರೆ ಅವರು ಅಧಿಕಾಕ್ಕೆ ಬಂದ ಮೇಲೆ ನರೇಗಾ ನಡೆಸಿಕೊಂಡು ಹೋಗಿದ್ದಾರೆ. ಇದರಿಂದ ಜೆಡಿಪಿ ಬೆಳೆಯುತ್ತದೆ ಎಂದು ವಿಶ್ವ ಬ್ಯಾಂಕ್‌ನವರೇ ಹೇಳಿದ್ದಾರೆ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ, ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ ಎಸ್. ಮಾತನಾಡಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಶಿವಲೀಲಾ ಕುಲಕರ್ಣಿ, ದೀಪಕ ಚಿಂಚೋರೆ, ಡಾ. ಮಯೂರ ಮೋರೆ, ದೀಪಾ ಗೌರಿ, ಪಾಲಿಕೆ ಸದಸ್ಯರು, ಇತರರು ಇದ್ದರು.
ಗ್ರಾಮಾಂತರ ವಿಭಾಗದ ನಿಯಂತ್ರಣಾಧಿಕಾರಿ ಡಾ. ಶಶಿಧರ ಚನ್ನಪ್ಪಗೌಡರ ಸ್ವಾಗತಿಸಿದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು. ವಾಕರಸಾ ಸಂಸ್ಥೆ ಕೇಂದ್ರ ಕಚೇರಿ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ ಹುದ್ದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net