ಭದ್ರಾವತಿಯಲ್ಲಿ ಪಾಕ್ ಘೋಷಣೆ ಖಂಡನೀಯ: ಬಿವೈಆರ್

Raghavendra
Published on

ಶಿವಮೊಗ್ಗ: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸ್ವಚ್ಛಂದವಾಗಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳು ಅತ್ಯಂತ ಆತಂಕಕಾರಿಯಾಗಿದೆ. ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದನ್ನು ಖಂಡನೀಯ. ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯಕ್ಕೆ ಇದೊಂದು ಕೈಗನ್ನಡಿ. ಈ ವರ್ತನೆ ತೋರಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್ವರ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವ ಆಸೆ ಇದೆ ಎಂದು ಹೇಳಿರುವುದು ಕಾಂಗ್ರೆಸ್ ಸರ್ಕಾರದ ಅತಿಯಾದ ಮುಸ್ಲಿಂ ಓಲೈಕೆ ಮಾಡುತ್ತಿರುವ ಅಸಲಿ ಮುಖವನ್ನು ಬಯಲು ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಸೈನಿಕರು ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಶತ್ರು ರಾಷ್ಟ್ರದ ವಿರುದ್ಧ ಸಮರ ನಡೆಸಿದ್ದರೆ, ರಾಜ್ಯದ ಒಳಗೆಯೇ ಕೆಲವು ಮತಾಂಧ ಶಕ್ತಿಗಳು, ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಾರೆ. ಇದನ್ನು ನೋಡಿಯೂ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ ಎಂದರೆ ಇದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ. ಕೇವಲ ತಮ್ಮ ತುಷ್ಟೀಕರಣ ರಾಜಕೀಯಕ್ಕಾಗಿ, ದೇಶವಿರೋಧಿ ಚಟುವಟಿಕೆಗಳನ್ನು, ದುಷ್ಕರ್ಮಿಗಳನ್ನು ಮಟ್ಟ ಹಾಕದೆ ರಾಜ್ಯ ಸರ್ಕಾರವೇ ಅವರನ್ನು ಪೋಷಿಸುತ್ತಿರುವುದು ನಿಜಕ್ಕೂ ದುರಂತ ಎಂದಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ, ಕರ್ನಾಟಕದಲ್ಲಿ ದೇಶ ವಿರೋಧಿ ಚಟುವಟಿಕೆಗಳು, ಅರಾಜಕತೆ, ಕಾನೂನುಬಾಹಿರ ಚಟುವಟಿಕೆಗಳು ಮತ್ತು ದುಷ್ಕರ್ಮಿಗಳ ಅಟ್ಟಹಾಸದಲ್ಲಿ ಹೆಚ್ಚಳವಾಗಿದೆ. ಈ ಸರ್ಕಾರ ತಮ್ಮ ಪರವಾಗಿದೆ ಎನ್ನುವ ಧೈರ್ಯ ಈ ದುಷ್ಕರ್ಮಿಗಳಿಗೆ ಇರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಬಿವೈಆರ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಯಿತು. ವಿಧಾನಸೌಧದ ಒಳಗೆಯೇ ಪಾಕಿಸ್ತಾನ ಪರ ಘೋಷಣೆ ಕೂಗಲಾಯಿತು. ಮಂಡ್ಯದ ಕೆರೆಕೋಡಿಯಲ್ಲಿ ಹನುಮಾನ್ ಧ್ವಜ ತೆರವು ಮಾಡಲಾಯಿತು. ದಕ್ಷಿಣ ಕನ್ನಡದಲ್ಲಿ ಭಾರತ್ ಮಾತಾ ಕಿ ಜೈ ಎಂದು ಯುವಕನಿಗೆ ಚಾಕು ಇರಿಯಲಾಯಿತು. ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಇಂತಹ ಘಟನೆಗಳು ಮೇಲಿಂದ ಮೇಲೆ ಪುನರಾವರ್ತನೆಯಾಗುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ, ಅವರು ಶಾಂತಿ ಪ್ರಿಯರು ಎಂದು ಹೇಳಿಕೆ ನೀಡುತ್ತಾರೆ. ಆ ಮೂಲಕ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಅವರು ಕ್ಲೀನ್‌ಚಿಟ್ ನೀಡುತ್ತಿದ್ದಾರೆ. ಇದು ಮತಾಂಧರನ್ನು ಮತ್ತಷ್ಟು ಪ್ರಚೋದಿಸುತ್ತದೆ ಮತ್ತು ಅಂತಹ ಕೃತ್ಯಗಳಿಗೆ ರಾಜ್ಯ ಸರ್ಕಾರದ ಪರೋಕ್ಷ ಬೆಂಬಲವಿದೆ ಎಂಬ ಸಂದೇಶವನ್ನು ರವಾನಿಸುತ್ತದೆ. ಇದಕ್ಕೆ ನಿನ್ನೆ ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದೇ ಸಾಕ್ಷಿ ಎಂದಿದ್ದಾರೆ.

ಮತ ಬ್ಯಾಂಕ್ ಎನ್ನುವ ಕಾರಣಕ್ಕೆ ಒಂದು ಸಮುದಾಯವನ್ನು ರಾಜ್ಯ ಸರ್ಕಾರ ಅತಿಯಾಗಿ ಓಲೈಸುತ್ತಿದೆ. ಆ ಮೂಲಕ ಸಮಾಜಘಾತುಕ ಶಕ್ತಿಗಳಿಗೆ ನೀಡುತ್ತಿರುವ ಬೆಂಬಲ ಮತ್ತು ಹಿಂದೂ ವಿರೋಧಿ ನಿಲುವುಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಸರ್ಕಾರ ಕೀಳು ತುಷ್ಟೀಕರಣ ರಾಜಕಾರಣ ಖಂಡನೀಯ. ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಘವೇಂದ್ರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net