

ನರೇಗಲ್ಲ: ಪಟ್ಟಣದ ಹೃದಯಭಾಗವಾದ ಗಣೇಶ ದೇವಸ್ಥಾನ (ಚಾವಡಿ) ಹತ್ತಿರ ಪ್ರತಿ ಸೋಮವಾರ ನಡೆಯುವ ವಾರದ ತರಕಾರಿ ಸಂತೆ ಸ್ಥಳಾಂತರಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿವೆ.
ಸಂತೆ ಬಜಾರ್ ಅನ್ನು ಸ್ಥಳಾಂತರಿಸಬೇಕು ಎಂದು ಕೆಲವರು ಪಪಂಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ಆದರೆ, ಅದಕ್ಕೆ ವಿರೋಧ ವ್ಯಕ್ತಪಡಿಸಿದ ಮತ್ತೆ ಕೆಲವರು ಯಾವುದೇ ಕಾರಣಕ್ಕೂ ಸಂತೆ ನಡೆಯುತ್ತಿರುವ ಸ್ಥಳ ಬದಲಾಯಿಸಬಾರದು ಎಂದು ಶುಕ್ರವಾರ ಮನವಿ ಸಲ್ಲಿಸಿದೆ. ಹೀಗಾಗಿ ಪಟ್ಟಣದ ಪಂಚಾಯಿತಿ ಅಧಿಕಾರಿಗಳಿಗೆ ದಿಕ್ಕು ತೋಚದಂತಾಗಿದೆ.
ಹಿನ್ನೆಲೆ: ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ವಾರದ ತರಕಾರಿ ಸಂತೆಗಾಗಿ ಪಟ್ಟಣದ ಗಣೇಶ ದೇವಸ್ಥಾನದ ಮುಂಭಾಗದಿಂದ ಗಜೇಂದ್ರಗಡ ಮುಖ್ಯ ರಸ್ತೆಯವರೆಗೆ ಸಂತೆ ನಡೆಯುತ್ತದೆ. ಇದು ಬಹಳಷ್ಟು ಇಕ್ಕಟ್ಟಾದ ಸ್ಥಳವಾಗಿರುವುದರಿಂದ ಇದನ್ನು ಅಬ್ಬಿಗೇರಿ ರಸ್ತೆ ಹಿರೇಕೆರೆ ದಂಡೆಗೆ ತಾಗಿಕೊಂಡಿರುವ ರಸ್ತೆಗೆ ಸ್ಥಳಾಂತರಿಸಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಅಂದಿನ ಮುಖ್ಯಾಧಿಕಾರಿ ಎನ್.ಎಂ. ನೂರುಲ್ಲಾಖಾನ್ ಅವರು ಹಿರೇಕೆರೆಯ ದಂಡೆಯನ್ನು ಸ್ವಚ್ಛಗೊಳಿಸಿ, ಸಂತೆಯನ್ನು ಸ್ಥಳಾಂತರಿಸಲು ಮುಂದಾಗಿದ್ದರು. ಆದರೆ, ವ್ಯಾಪಾರಸ್ಥರು, ಸಾರ್ವಜನಿಕರ ವಿರೋಧ ವ್ಯಕ್ತವಾಗಿದ್ದರಿಂದ ಸಂತೆ ಸ್ಥಳಾಂತರವನ್ನು ಕೈಬಿಡಲಾಗಿತ್ತು.
ಈಗ ಸಂತೆಯನ್ನು ಅಬ್ಬಿಗೇರಿ ರಸ್ತೆಗೆ ಸ್ಥಳಾಂತರಿಸಬೇಕು ಎಂದು ಎಂದು ಗುರುವಾರ ಭೋವಿ ಸಮಾಜದ ಮಹಿಳಾ ಮುಖ್ಯಸ್ಥೆ ರೇಣವ್ವ ನವಲಗುಂದ ನೇತೃತ್ವದಲ್ಲಿ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ವಿರೋಧವಾಗಿ ಶುಕ್ರವಾರ ಪ.ಪಂ ಮಾಜಿ ಅಧ್ಯಕ್ಷ ಕಲ್ಮೇಶ ತೊಂಡಿಹಾಳ ನೇತೃತ್ವದಲ್ಲಿ ಪಪಂಗೆ ಮನವಿ ಸಲ್ಲಿಸಲಾಗಿದೆ.
ಸದ್ಯ ಸಂತೆ ನಡೆಯುತ್ತಿರುವ ಗಣೇಶ ದೇವಸ್ಥಾನದ ಮುಂಭಾಗ ಬಹಳಷ್ಟು ಇಕ್ಕಟ್ಟಾದ ಪ್ರದೇಶವನ್ನು ಹೊಂದಿದ್ದು, ವಾರದ ಸಂತೆಯ ಸಂದರ್ಭದಲ್ಲಿ ತುಂಬಾ ತೊಂದರೆಯಾಗುತ್ತಿದೆ. ಇಕ್ಕಟ್ಟಾದ ಸ್ಥಳದಲ್ಲಿ ಸಂತೆ ನಡೆಯುತ್ತಿರುವುದರಿಂದ ಇದರ ಲಾಭ ಪಡೆಯುವ ಕಳ್ಳರು ಮೊಬೈಲ್, ಹಣ ದೋಚಿದ ಉದಾಹರಣೆಗಳಿವೆ. ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸಂತೆಯನ್ನು ಅಬ್ಬಿಗೇರಿ ರಸ್ತೆಗೆ ಸ್ಥಳಾಂತರಿಸಬೇಕು ಎನ್ನುವುದು ಕೆಲವರ ವಾದವಾಗಿದೆ.
ಸುಮಾರು 150 ವರ್ಷಗಳಿಗಿಂತಲೂ ಇದೇ ಜಾಗದಲ್ಲಿ ಸಂತೆ ನಡೆಯುತ್ತಿದೆ. ಅಲ್ಲದೆ, ಈ ಸ್ಥಳವು ಪಟ್ಟಣದ ಮಧ್ಯ ಭಾಗದಲ್ಲಿರುವುದರಿಂದ ಎಲ್ಲರಿಗೂ ಸೂಕ್ತವಾಗಿದೆ. ಸ್ಥಳಾಂತರಿಸಲು ಉದ್ದೇಶಿಸಿರುವ ಜಾಗದಲ್ಲಿ ವಾಹನದಟ್ಟಣೆ ಹೆಚ್ಚಾಗಿದೆ. ಸಾವಿರಾರು ವಿದ್ಯಾರ್ಥಿಗಳು ಇದೇ ರಸ್ತೆ ಮೂಲಕ ಸಂಚರಿಸುತ್ತಾರೆ ಹೀಗಾಗಿ ಸಂತೆಗೆ ತೊಂದರೆಯಾಗುತ್ತದೆ. ಇರುವ ಸ್ಥಳದಲ್ಲಿಯೇ ಪೊಲೀಸ್ ಬಂದೋಬಸ್ತ್ ಒದಗಿಸಿ ಸಂತೆಯನ್ನು ನಡೆಸಬೇಕು ಎನ್ನುವುದು ಮತ್ತೆ ಕೆಲವರ ಒತ್ತಾಯವಾಗಿದೆ.
ಪಟ್ಟಣದ ಸಂತೆ ಬಜಾರ ಬಹಳಷ್ಟು ಇಕ್ಕಟ್ಟಾದ ಸ್ಥಳದಲ್ಲಿ ನಡೆಯುತ್ತಿದ್ದು, ಅದನ್ನು ಸ್ಥಾಂತರಿಸುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಅದರಂತೆ, ಅಬ್ಬಿಗೇರಿ ರಸ್ತೆಯ ಪ.ಪಂ ವಾಣಿಜ್ಯ ಮಳಿಗೆಯಿಂದ ರೈತ ಸಂಪರ್ಕ ಕೇಂದ್ರದವರೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಸಂತೆ ಸ್ಥಳಾಂತರವನ್ನು ವಿರೋಧಿಸಿಯೂ ಕೆಲವರು ಮನವಿ ಸಲ್ಲಿಸಿದ್ದಾರೆ. ಮನವಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸಕಲ ಸೌಲಭ್ಯ ಹೊಂದಿರುವ ಮಾರುಕಟ್ಟೆ ನಿರ್ಮಾಣದ ಅವಶ್ಯಕತೆ ಇದ್ದು, ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ.ಶಿವಾನಂದ ಅಜ್ಜಣ್ಣವರ, ಮುಖ್ಯಾಧಿಕಾರಿ ಪ.ಪಂ ನರೇಗಲ್ಲ