ಮಾರುಕಟ್ಟೆ ನೆಲಸಮಕ್ಕೆ ಪರ-ವಿರೋಧ

Devaraja Market
Published on

ಮೈಸೂರು: ಶತಮಾನದ ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆಯನ್ನು ನೆಲಸ ಮಾಡಿ ಪಾರಂಪರಿಕ ಶೈಲಿಯಲ್ಲಿ ಹೊಸ ಕಟ್ಟಡ ನಿರ್ಮಾ ಣ ಮಾಡಲು ಮುಂದಾಗಿರುವ ನಗರ ಪಾಲಿಕೆಯ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಪಾರಂಪರಿಕ ಕಟ್ಟಡಗಳ ಮೂಲಕ ಮೈಸೂರು ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಇಲ್ಲಿನ ಪರಂಪರೆಯನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಪ್ರವಾಸಿಗರು ಆಗಮಿಸುತ್ತಾರೆ. ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡಿದರೆ ಇಲ್ಲಿನ ಕಾಂಕ್ರೀಟ್ ಕಾಡನ್ನು ನೋಡಲು ಯಾರು ಬರುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಒಂದು ವೇಳೆ ಕಟ್ಟಡ ದುಸ್ಥಿತಿಗೆ ತಲುಪಿದರೆ ಅದನ್ನು ‘ಮೈಸೂರು ಪರಂಪರೆ’ ಹೆಸರಿನಲ್ಲಿ ಉಳಿಸಿ ಬೇರೆಡೆ ಬೇಕಾದರೆ ಮಾರುಕಟ್ಟೆ ನಿರ್ಮಾಣ ಮಾಡಿ. ಮಹಾರಾಜರು ಕಟ್ಟಿದ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವುದು ಸರಿಯಲ್ಲ ಎಂಬುದು ನಗರದ ಬಹುತೇಕ ಜನರ ಅಭಿಪ್ರಾಯವಾಗಿದೆ.

ದೇವರಾಜ ಮಾರುಕಟ್ಟೆಯನ್ನು ಕೆಡವಿದ ನಂತರ ಮುಂದಿನ ಹಂತದಲ್ಲಿ ಲ್ಯಾನ್ಸ್‌ಡೌನ್ ಕಟ್ಟಡವನ್ನು ಸಹ ಕೆಡವಲು ನಗರ ಪಾಲಿಕೆ ಯೋಜನೆ ರೂಪಿಸಿದೆ. ಹೀಗಾಗಿ ದೇವರಾಜ ಮಾರುಕಟ್ಟೆಯನ್ನು ಕೆಡವಲು ಅವಕಾಶ ಮಾಡಿಕೊಟ್ಟರೆ ನಗರದಲ್ಲಿ ಯಾವುದೇ ಪಾರಂಪರಿಕ ಕಟ್ಟಡಗಳನ್ನು ಇನ್ನು ಮುಂದೆ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಆತಂಕ ಎದುರಾಗಿದೆ.

ಪಾರಂಪರಿಕ ಕಟ್ಟಡದ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲು ಪಾರಂಪರಿಕ ತಜ್ಞರ ಸಮಿತಿ ರಚಿಸಿ ವರದಿ ಪಡೆದು, ಆ ವರದಿ ಆಧಾರದ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳಲು ಹೈಕೋರ್ಟ್ ನಗರ ಪಾಲಿಕೆಗೆ ನಿರ್ದೇಶನ ನೀಡಿತ್ತು. ಆದರೆ, ನಗರ ಪಾಲಿಕೆ ಸಿವಿಲ್ ಇಂಜಿನಿಯರ್‌ಗಳನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿದ್ದು, ಇವರಿಗೆ ಪಾರಂಪರಿಕ ಕಟ್ಟಡಗಳ ಕುರಿತು ಯಾವುದೇ ಮಾಹಿತಿ ಇಲ್ಲ.
ಈ ಸಮಿತಿ ಇದೀಗ ಕಟ್ಟಡ ಕೆಡಹುವುದು ಸೂಕ್ತ ಎಂದು ವರದಿ ನೀಡಿದೆ. ಪಾರಂಪರಿಕ ಕಟ್ಟಡಗಳ ತಜ್ಞರಲ್ಲದವರನ್ನು ಸಮಿತಿಗೆ ನೇಮಕ ಮಾಡಿ ವರದಿ ಪಡೆದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಕಟ್ಟಡದ ವಿಚಾರ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರುವ ಎಲ್ಲ ಲಕ್ಷಣಗಳು ಕಾಣುಸುತ್ತಿದೆ.

ಪರಂಪರೆ ಉಳಿಸಿ: ನಗರದ ಲ್ಯಾನ್ಸ್‌ಡೌನ್ ಕಟ್ಟಡ ಸಂರಕ್ಷಣೆ ಕಾರ್ಯಕ್ಕೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಚಾಲನೆ ನೀಡಲಾಗಿತ್ತು. ನಂತರ ದೇವರಾಜ ಮಾರುಕಟ್ಟೆಯ ಒಂದು ಭಾಗ ಕುಸಿದ ಹಿನ್ನೆಲೆಯಲ್ಲಿ ಸಂರಕ್ಷಣಾ ಕಾರ್ಯ ಕೈ ಬಿಡಲಾಯಿತು. ಇದೇ ಸಂದರ್ಭ ನಗರ ಪಾಲಿಕೆಯು ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ, ಮಂಡಿ ಮಾರುಕಟ್ಟೆ ಹಾಗೂ ವಾಣಿವಿಲಾಸ ಮಾರುಕಟ್ಟೆಯನ್ನು ಪುನರ್ ನಿರ್ಮಾಣ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು. ಈ ರೀತಿ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ನೆಪವೊಡ್ಡಿ ನೆಲಸಮ ಮಾಡುತ್ತಾ ಹೋದರೆ ಮೈಸೂರು ಪಾರಂಪರಿಕ ನಗರಿ ಎಂಬ ಬಿರುದನ್ನು ಕಳಚಿಕೊಳ್ಳುವ ದಿನಗಳು ದೂರವಿಲ್ಲ. ಈ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಜ್ಞರ ವರದಿ ಪಡೆದು ಕ್ರಮ
ದೇವರಾಜ ಮಾರುಕಟ್ಟೆ ಶಿಥಿಲಾವಸ್ಥೆಗೆ ತಲುಪಿದ್ದು, ಸಂರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ತಜ್ಞರ ಸಮಿತಿ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡವನ್ನು ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡಲು ನೀಲನಕ್ಷೆ ತಯಾರಿಸಿ ಪಾರಂಪರಿಕ ಸಮಿತಿಯಿಂದ ಅನುಮೋದನೆ ಪಡೆಯಲಾಗುವುದು. ದೇವರಾಜ ಮಾರುಕಟ್ಟೆ ರೀತಿಯಲ್ಲಿ ಲ್ಯಾನ್ಸ್‌ಡೌನ್ ಕಟ್ಟಡದ ಕುರಿತು ತಜ್ಞರಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಗುರುದತ್ತ ಹೆಗಡೆ ಪಾಲಿಕೆ ಆಯುಕ್ತ

ಕಟ್ಟಡ ಸಂರಕ್ಷಣೆಗೆ ಸಹಕಾರ
ನಗರದ ಪರಂಪರೆ ಉಳಿಸಲು ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವ ಅವಶ್ಯಕತೆ ಇದೆ. ಕಟ್ಟಡವನ್ನು ಕೆಡವುವ ಬದಲು ಸಂರಕ್ಷಣೆ ಮಾಡುವ ಕಡೆಗೆ ಚಿಂತನೆ ಹರಿಸಬೇಕಾಗಿದೆ. ದೇವರಾಜ ಮಾರುಕಟ್ಟೆ ಸಂರಕ್ಷಣೆ ಮಾಡಲು ಸಾಧ್ಯವಿದ್ದು, ಕಟ್ಟಡ ಸಂರಕ್ಷಣೆಗೆ ನಮ್ಮಿಂದ ಅಗತ್ಯ ಸಹಕಾರ ನೀಡಲಾಗುವುದು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ರಾಜವಂಶಸ್ಥ

ಕಟ್ಟಡ ಕೆಡಹುವುದು ಸರಿಯಲ್ಲ
ಮಹಾರಾಜರ ಕಾಲದ ಮೈಸೂರನ್ನು ನೋಡುವ ಸಲುವಾಗಿ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ಹೀಗಾಗಿ ಪಾರಂಪರಿಕ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವುದು ಸರಿಯಲ್ಲ. ಕಟ್ಟಡವನ್ನು ಸಂರಕ್ಷಣೆ ಮಾಡಲು ಸಾಧ್ಯವಿದೆ. ಒಂದು ವೇಳೆ ಸರ್ಕಾರಕ್ಕೆ ಸಾಧ್ಯವಾಗದೆ ಇದ್ದರೆ ನಮ್ಮ ಮೈಸೂರು ಫೌಂಡೇಷನ್ ಅಥವಾ ಇಂಟೆಕ್ ಸಂಸ್ಥೆಗೆ ಕಟ್ಟಡವನ್ನು ವಹಿಸಿದರೆ ನಾವೆ ಸಂರಕ್ಷಣೆ ಮಾಡುತ್ತೇವೆ.
ಎನ್.ಎಸ್. ರಂಗರಾಜು ಪಾರಂಪರಿಕ ಸಮಿತಿ ಸದಸ್ಯ

ಪರಂಪರೆ ಅಳಿಸಿ ಹಾಕುವ ಯತ್ನ
ಮೈಸೂರಿನ ಪರಂಪರೆ ಅಳಿಸಿ ಹಾಕಲು ಸರ್ಕಾರ ಮುಂದಾಗಿದೆ. ಇಂದು ದೇವರಾಜ ಮಾರುಕಟ್ಟೆಯನ್ನು ಕೆಡಹುವು ಇವರು ನಾಳೆ ಅರಮನೆ ಶಿಥಿಲಾವಸ್ಥೆಗೆ ತಲುಪಿದೆ ಎಂದು ಅರಮನೆ ಕಾಂಪ್ಲೆಕ್ಸ್ ಕಟ್ಟಿದರೂ ಆಶ್ಚರ್ಯವಿಲ್ಲ. ನಗರದ ಪರಂಪರೆ ಉಳಿಸಲು ನಾವು ನಿರಂತರ ಹೋರಾಟ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಕಟ್ಟಡ ಕೆಡವಲು ಅವಕಾಶ ನೀಡುವುದಿಲ್ಲ.
ಪ್ರೊ.ಪಿ.ವಿ. ನಂಜರಾಜೇ ಅರಸ್ ಇತಿಹಾಸ ತಜ್ಞ

ಕೋರ್ಟ್‌ನಲ್ಲಿ ಪ್ರಶ್ನೆ
ಪಾರಂಪರಿಕ ಕಟ್ಟಡಗಳ ತಜ್ಞರ ಸಮಿತಿ ವರದಿಯ ಆಧಾರದ ಮೇಲೆ ದೇವರಾಜ ಮಾರುಕಟ್ಟೆಯ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ನಗರ ಪಾಲಿಕೆ ಸಿವಿಲ್ ಇಂಜಿನಿಯರ್‌ಗಳನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿದೆ ಎಂದು ತಮಗೆ ಬೇಕಾದ ಹಾಗೆ ವರದಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು.
ಮಹದೇವು ಅಧ್ಯಕ್ಷ, ದೇವರಾಜ ಮಾರುಕಟ್ಟೆ ವರ್ತಕರ ಸಂಘ

ಪಾರಂಪರಿಕ ಶೈಲಿ ಇರಲಿ
ಕಟ್ಟಡ ಈಗಾಗಲೆ ಶಿಥಿಲಾವಸ್ಥೆಗೆ ತಲುಪಿದ್ದು, ಸಂರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ. ಹೀಗಾಗಿ ಕಟ್ಟಡವನ್ನು ಕೆಡವಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡುವುದು ಸೂಕ್ತ. ಹೊಸ ಕಟ್ಟಡ ನಿರ್ಮಾಣ ಮಾಡುವ ಸಂದರ್ಭ ಪಾರಂಪರಿಕ ಶೈಲಿಯಲ್ಲಿಯೇ ನಿರ್ಮಾಣ ಮಾಡಬೇಕು.
ತೇಜೇಸ್ ಲೋಕೇಶ್‌ಗೌಡ ನಗರದ ನಿವಾಸಿ

ಪಾರಂಪರಿಕ ಕಟ್ಟಡಗಳನ್ನು ಉಳಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಆದರೆ, ಸರ್ಕಾರವೇ ಕಟ್ಟಡ ಕೆಡವಲು ಮುಂದೆ ನಿಂತಿರುವುದು ಸರಿಯಲ್ಲ. ಇಂದಿಗೂ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡ ಸುಭದ್ರವಾಗಿದೆ. ಒಂದು ವೇಳೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರೆ ಈ ಏಳೆಂಟು ವರ್ಷಗಳ ಅವಧಿಯಲ್ಲಿ ಯಾವತ್ತೋ ಕುಸಿದು ಬೀಳುತ್ತಿತ್ತು. ಆದರೆ, ಇಷ್ಟು ವರ್ಷ ನಿರ್ವಹಣೆ ಇಲ್ಲದೆ ಇದ್ದರೂ ಈ ಕಟ್ಟಡಗಳು ಮಳೆ, ಗಾಳಿಯನ್ನು ತಡೆದು ನಿಂತಿವೆ. ಇದನ್ನು ಸರ್ಕಾರ ಅರ್ಥಮಾಡಿಕೊಂಡು ಕಟ್ಟಡ ಸಂರಕ್ಷಣೆಗೆ ಮುಂದಾಗಬೇಕು.
ಆರ್.ಮೂರ್ತಿ ಅಧ್ಯಕ್ಷ, ಲ್ಯಾನ್ಸ್‌ಡೌನ್ ವರ್ತಕರ ಸಂಘ

ಮರುನಿರ್ಮಾಣ ಸೂಕ್ತ
ಶಿಥಿಲಾವಸ್ಥೆಯಿಂದ ಕೂಡಿರುವ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಸುವುದು ಅಪಾಯಕಾರಿ. ಈ ಹಿಂದೆ ಲ್ಯಾನ್ಸ್‌ಡೌನ್ ಕಟ್ಟಡ ಕುಸಿದು ಜನರು ಜೀವ ಕಳೆದುಕೊಂಡರು. ಇಲ್ಲೂ ಅಂಥ ದುರ್ಘಟನೆ ಆಗದಂತೆ ಎಚ್ಚರ ವಹಿಸಲು ಕಟ್ಟಡವನ್ನು ಮರು ನಿರ್ಮಾಣ ಮಾಡುವುದು ಸೂಕ್ತ.
ಡಾ.ಪಿ.ಶಾಂತರಾಜೇ ಅರಸ್ ನಗರದ ನಿವಾಸಿ
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net