ಬಂದ್‍ಗೆ ಕನ್ನಡಪರ ಸಂಘಟನೆಗಳ ಬೆಂಬಲ

Tegur Jagadeesh
????????????????????????????????????
Published on

ಚಿಕ್ಕಮಗಳೂರು: ಮರಾಠ ಅಭಿವೃದ್ಧಿ ನಿಗಮ ರದ್ದುಗೊಳಿಸಲು ಒತ್ತಾಯಿಸಿ ಹಾಗೂ ಕನ್ನಡಪರ ಸಂಘಟನೆಗಳ ವಿರುದ್ಧ ಶಾಸಕರು ನೀಡಿರುವ ಹೇಳಿಕೆ ಖಂಡಿಸಿ ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ತಿಳಿಸಿದರು.

ಸ್ವಾರ್ಥ ರಾಜಕಾರಣ, ಹೈಕಮಾಂಡ್ ಓಲೈಕೆ ಮತ್ತು ಬಸವ ಕಲ್ಯಾಣ, ಮಸ್ಕಿ ವಿಧಾನಸಭಾ ಉಪ ಚುನಾವಣೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಏಕಾಏಕಿ ಮರಾಠ ಅಭಿವೃದ್ಧಿ ನಿಗಮ ರಚಿಸಲಾಗಿದೆ. ಈ ಬೆಳವಣಿಗೆ ಜತೆಗೆ ಕೆಲವು ಶಾಸಕರು ಇದನ್ನು ಸಮರ್ಥಿಸಿ ಕನ್ನಡಿಗರ ಮತವೇ ಬೇಡ. ಹೋರಾಟಗಾರರನ್ನುಗುಂಡಿಕ್ಕಿ ಕೊಲ್ಲಿ ಎಂದು ಹೇಳಿಕೆ ನೀಡಿರುವುದು ಅತಿರೇಕದ ಪರಮಾವಧಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸಂಘ-ಸಂಸ್ಥೆಗಳ ಸಹಕಾರ

ಜಿಲ್ಲೆಯ ಎಲ್ಲ ರೈತಪರ, ಕಾರ್ಮಿಕ, ದಲಿತಪರ ಸಂಘಟನೆಗಳು, ವರ್ತಕರು, ಹೋಟೆಲ್ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ವಿವಿಧ ಪಕ್ಷಗಳು, ಸಂಘಟನೆಗಳು ಬಂದ್ ಸಹಕಾರದ ಭರವಸೆ ನೀಡಿವೆ ಎಂದು ಹೇಳಿದರು.

ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಹಾಗೂ ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಕೊಡದೆ, ಉತ್ತರ ಕರ್ನಾಟಕದಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಬೀದಿ ಪಾಲಾಗಿರುವ ರೈತರು ಮತ್ತು ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸದೆ ಮರಾಠ ನಿಗಮಕ್ಕೆ 50 ಕೋಟಿ ರೂ. ನೀಡಿರುವುದು ಸರಿಯಲ್ಲ ಎಂದರು.

ಪ್ರತಿಭಟನಾ ಮೆರವಣಿಗೆ

ಡಿ.5ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಸಲಾಗುವುದು. ಮಧ್ಯಾಹ್ನ 12ಕ್ಕೆ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ. ಮರಾಠಿ ಭಾಷಿಕ ಹಾಗೂ ಸಮುದಾಯದ ವಿರುದ್ಧ ನಮಗೆ ಯಾವುದೇ ದ್ವೇಷವಿಲ್ಲ. ಆದರೆ ನಮ್ಮ ನಾಡಿನಲ್ಲಿದ್ದು ಮಹಾರಾಷ್ಟ್ರಕ್ಕೆ ಜೈ ಎನ್ನುವ ಪುಂಡರು ಹಾಗೂ ಎಂಇಎಸ್ ಸಂಘಟನೆ ವಿರುದ್ಧ ನಮ್ಮ ನಿಲುವು ಎಂದರು.

ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ನವ ಕರ್ನಾಟಕ ಯುವಶಕ್ತಿ ಅಧ್ಯಕ್ಷ ಸಿ.ಆರ್.ರಘು, ಕರವೇ ಜಿಲ್ಲಾ ಕಾರ್ಯದರ್ಶಿ ಶಶಿ ಆಣೂರು, ಕೆ.ಎಂ.ಜಯಪ್ರಕಾಶ್, ಶಂಕರೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net