ಸ್ವಾಮೀಜಿ ಗಡಿಪಾರಿಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಆಗ್ರಹ

Rajyothsava
Published on

ಚಿಕ್ಕಮಗಳೂರು: ಕನ್ನಡಪರ ಸಂಘಟನೆ ಹೋರಾಟಗಾರರಿಗೆ ಗುಂಡಿಕ್ಕಿ ಎಂದು ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಿರುವ ಸ್ವಾಮೀಜಿಯನ್ನು ಗಡಿಪಾರು ಮಾಡಿ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಆಗ್ರಹಿಸಿದರು.

ಕೆಂಪನಹಳ್ಳಿ ಬೀರಲಿಂಗೇಶ್ವರ ಆಟೋ ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿ, ಡಿ.5ರಂದು ರಾಜ್ಯ ಬಂದ್ ಕರೆ ನೀಡಿರುವ ಕನ್ನಡಪರ ಸಂಘಟನೆ ಪದಾಧಿಕಾರಿಗಳಿಗೆ ಗುಂಡಿಕ್ಕಿ ಎಂದು ಹೇಳಿದ್ದಾರೆ. ಯಾರೋ ಒಬ್ಬರು ಕೆಟ್ಟ ಕೆಲಸ ಮಾಡಿದ್ದಕ್ಕೆ ಸಂಘಟನೆಯನ್ನೇ ಸ್ವಾಮೀಜಿ ದೂರಿರುವುದು ಸರಿಯಲ್ಲ ಎಂದು ಹೇಳಿದರು.

ಹೊರಗಿನವರಿಗೆ ಮಣೆ ಸಲ್ಲದು
ಮುಖ್ಯಮಂತ್ರಿ ಹೊರ ರಾಜ್ಯದವರಿಗೆ ಮಣೆ ಹಾಕಿದರೆ ಹೋರಾಟ ಅನಿವಾರ್ಯ. ಕನ್ನಡಿಗರ ಹಿತಾಸಕ್ತಿಗಾಗಿ ಡಿ.5ರಂದು ಸಂಘಟನೆಗಳು ಬಂದ್ ಕರೆ ನೀಡಿದಲ್ಲಿ ರಾಜ್ಯದ ಜನ ಒಗ್ಗಟ್ಟಾಗಿ ಸಹಕರಿಸುವಂತೆ ಮನವಿ ಮಾಡಿದರು.

ಆಟೋ ಚಾಲಕ ಜಯಪ್ರಕಾಶ್ ಮಾತನಾಡಿ, ಕೆಂಪನಹಳ್ಳಿ ಶಾಲೆ ನಿವೃತ್ತ ಶಿಕ್ಷಕ ಈರೇಗೌಡ ಸ್ವಂತ ಸಂಬಳದಲ್ಲಿ ಬಡಮಕ್ಕಳಿಗೆ ಬಟ್ಟೆ, ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಇಂದಿನ ಕಾಲದಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿರುವ ಶಿಕ್ಷಕರಿಗೆ ಗೌರವಿಸಲು ಹೆಮ್ಮೆ ಎನಿಸುತ್ತದೆ ಎಂದರು.

ನಿವೃತ್ತ ಮುಖ್ಯಶಿಕ್ಷಕ ಈರೇಗೌಡ ಅವರನ್ನು ಗೌರವಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜಗದೀಶ್, ಕುಮಾರ್, ಮೋಹನ್, ತಿಮ್ಮಪ್ಪ, ಪರಮೇಶ್, ಚಂದ್ರು, ಶಂಕರೇಗೌಡ, ರಾಜು, ಉಮಾಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net