

ಮೈಸೂರು: ಮಾರ್ಚ್ 5 ರಂದು ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಸಾಲ ಮಾಡಿಯಾದರೂ ರೈತ ಪರ ಕಾರ್ಯಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ನಂಜನಗೂಡು ತಾಲೂಕಿನ ಶ್ರೀಕ್ಷೇತ್ರ ಸುತ್ತೂರಿನಲ್ಲಿ ಭಾನುವಾರ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಕೃಷಿ ಮತ್ತು ವಸ್ತುಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೇರೆ ಯಾವುದೇ ಕೆಲಸಕ್ಕೂ ಹಣಕಾಸಿನ ಕೊರತೆಯಾದರೂ ಪರವಾಗಿಲ್ಲ. ಆದರೆ, ರೈತರಿಗೆ ಮಾತ್ರ ಹೆಚ್ಚಿನ ನೆರವು ನೀಡಲಾಗುವುದು. ಸಾವಯವ ಕೃಷಿಗೆ ಒತ್ತು ನೀಡಿ, ಅಂತರ್ಜಲ ಮಟ್ಟ ವೃದ್ಧಿಸಿ, ಕೃಷಿಕರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ದೇಶಕ್ಕೆ ಸ್ವಾತಂತ್ರೃ ಬಂದು 72 ವರ್ಷವಾದರೂ ಅನ್ನದಾತನ ಸ್ಥಿತಿ ಸುಧಾರಿಸಿಲ್ಲ. ನೆಮ್ಮದಿ, ಗೌರವ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲಾಗದಂತಹ ಸನ್ನಿವೇಶಗಳು ನಿರ್ಮಾಣವಾಗಿವೆ. ಇದಕ್ಕೆ ಯಾರ ವಿರುದ್ಧವೂ ಬೊಟ್ಟು ಮಾಡಲ್ಲ. ಮುಂದಿನ ಮೂರೂವರೆ ವರ್ಷ ರೈತರ ಕಣ್ಣೀರು ಒರೆಸಿ, ನೆಮ್ಮದಿ ಬದುಕನ್ನು ಕಲ್ಪಿಸಿಕೊಡಲು ಶ್ರಮಿಸಲಾಗುವುದು ಎಂದರು.
ರೈತರ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅವರ ನೆರವಿಗೆ ಬರಲು 3 ಸಾವಿರ ಕೋಟಿ ರೂ. ಮೊತ್ತದ ಆವರ್ತ ನಿಧಿ ಸ್ಥಾಪಿಸಿ ಭತ್ತ ಸೇರಿ ಇನ್ನಿತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡಲಾಗುವುದು. ಒಟ್ಟಿನಲ್ಲಿ ಕೃಷಿಕರ ಜೀವನದಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅನೇಕ ಉದ್ದಿಮೆದಾರರೊಂದಿಗೆ ಸಮಾಲೋಚನೆ ನಡೆಸಿದ್ದು, ಇದರಿಂದಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗಳಿಗೆ ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಉದ್ದಿಮೆಗಳ ಸ್ಥಾಪನೆಗೆ ಎದುರಾಗಿರುವ ಕೆಲ ಕಾನೂನು ಅಡಚಣೆಗಳನ್ನು ನಿವಾರಣೆ ಮಾಡಲಿದ್ದು, ಮುಂದಿನ 5 ತಿಂಗಳಿನಲ್ಲಿ ಹೊಸ ಕೈಗಾರಿಕೆಗಳು ಬರಲಿವೆ ಎಂದರು.
ರಾಷ್ಟ್ರೀಯ ಹೆದ್ದಾರಿ ಬಳಿಯ ಕೆರೆಗಳನ್ನು ಹೂಳೆತ್ತಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ 10 ಕೋಟಿ ರೂ. ಖರ್ಚು ಮಾಡಿ ಹೆದ್ದಾರಿಯ ಎತ್ತರವನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದು, ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದರು.
ಸಾಲುಮರದ ತಿಮ್ಮಕ್ಕ ಅವರಿಗೆ ಸನ್ಮಾನ ಮಾಡಿದ ಸಿಎಂ, ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ ಬಳಿಕ ರಾಷ್ಟ್ರಪತಿಯವರು ಇವರಿಗೆ 2 ಕೋಟಿ ರೂ. ನೀಡಲು ಸೂಚಿಸಿದ್ದರಿಂದ ತೆರಿಗೆ ಕಡಿತ ಮಾಡಿ 1.37 ಕೋಟಿ ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. 50 ಲಕ್ಷ ರೂ. ಮೊತ್ತದ ಮನೆಯನ್ನು ಬೆಂಗಳೂರಿನಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.