

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರ ಸದಾ ಅಭಿವೃದ್ಧಿಪರವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದ ಏಕೈಕ ಪಕ್ಷ ನಮ್ಮದು. ಸುಸಜ್ಜಿತ ಭಾರತಕ್ಕೆ ಅಡಿಪಾಯ ಹಾಕಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿನ ಹು-ಧಾ ಪೂರ್ವ ಕ್ಷೇತ್ರದ ಸೆಟ್ಲಮೆಂಟ್ ದೊಡ್ಡಕೇರಿ ಓಣಿ, ಹಳೆ ಹುಬ್ಬಳ್ಳಿ, ಸದರಸೋಫಾ, ಜನ್ನತ ನಗರ ಮತ್ತು ಕೋಳೆಕರ ಪ್ಲಾಟ್ನಲ್ಲಿ ಒಟ್ಟು 3 ಕೋಟಿ ರೂ. ಅನುದಾನದಲ್ಲಿ ಚರಂಡಿ ಮತ್ತು ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ವಿಷಯದಲ್ಲಿ ಯಾವತ್ತಿಗೂ ರಾಜಕೀಯ ಮಾಡಿಲ್ಲ. ಸುಳ್ಳು ಹೇಳಿ ಅಧಿಕಾರ ಹಿಡಿದಿಲ್ಲ ಮತ್ತು ಜನರಿಗೆ ನೀಡಿದ ಭರಸೇಗಳನ್ನು ಎಂದಿಗೂ ಹುಸಿಗೊಳಿಸಿಲ್ಲ ಎಂಬುದು ಗಮನಾರ್ಹ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರುವಲ್ಲಿ ಕಾಂಗ್ರೆಸ್ ಶ್ರಮಿಸುತ್ತಿದೆ ಮತ್ತು ಜನಪರ ಆಡಳಿತ ನೀಡುತ್ತಿದೆ. ಇದು ನಮ್ಮ ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ನಿದರ್ಶನ ಎಂದರು.
ಕ್ಷೇತ್ರದಲ್ಲಿ ನಿರಂತವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಹಂತ ಹಂತವಾಗಿ ಕ್ಷೇತ್ರದ ಪ್ರತಿ ಪ್ರದೇಶವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದು, ಜನ ಸಹಕರಿಸಬೇಕು ಎಂದರು.
ಪಾಲಿಕೆ ಸದಸ್ಯರು, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರು, ಪಾಲಿಕೆ ಮಾಜಿ ಸದಸ್ಯರು, ಅಧಿಕಾರಿಗಳು, ಗುತ್ತಿಗೆದಾರರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.