

ಹುಬ್ಬಳ್ಳಿ : ಶಿಗ್ಗಾಂವಿ-ಸವಣೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಕುಟುಂಬಕ್ಕೆ ನೀಡಬೇಕೆಂಬ ಅಭಿಪ್ರಾಯ ಆ ಕ್ಷೇತ್ರದ ಮತದಾರರಿಂದ ವ್ಯಕ್ತವಾಗುತ್ತಿದೆ. ಮತದಾರರ ಸಂದೇಶವನ್ನು ಹೈಕಮಾಂಡ್ಗೆ ತಲುಪಿಸಿದ್ದು, ಮುಂದಿನ ನಿರ್ಧಾರ ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದು ವಿಧಾನಸಭೆ ವಿರೋಧಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ ಬೆಲ್ಲದ, ಪಕ್ಷದ ಮುಖಂಡರ ಸೂಚನೆಯಂತ ಶಿಗ್ಗಾಂವಿ-ಸವಣೂರ ವಿಧಾನಸಭೆ ಕ್ಷೇತ್ರದಲ್ಲಿ ಸಂಚರಿಸಿದ್ದಾಗಿ ತಿಳಿಸಿದರು.
ಬಸವರಾಜ ಬೊಮ್ಮಾಯಿ ಹಾಗೂ ದಿ. ಎಸ್.ಆರ್. ಬೊಮ್ಮಾಯಿ ಅವರು ಮಾಡಿರುವ ಜನಪರ ಕೆಲಸಗಳ ಆಧಾರದ ಮೇಲೆ ಉಪ ಚುನಾವಣೆ ಟಿಕೆಟ್ ಅನ್ನು ಬೊಮ್ಮಾಯಿ ಕುಟುಂಬದವರಿಗೆ ನೀಡುವಂತೆ ಕ್ಷೇತ್ರದ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಬಿಜೆಪಿ ಮುಖಂಡರು ಬಸವರಾಜ ಬೊಮ್ಮಾಯಿ ಅವರನ್ನು ದೆಹಲಿಗೆ ಕರೆಯಿಸಿಕೊಂಡಿದ್ದಾರೆ.
ಕ್ಷೇತ್ರದ ಬಿಜೆಪಿ ಪ್ರಮುಖರಾದ ಶ್ರೀಕಾಂತ ದುಂಡಿಗೌಡರ, ಶಶಿಧರ ಯಲಿಗಾರ, ಮ್ಯಾಗೇರಿ ಸೇರಿದಂತೆ 60ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಮುಖಂಡರು ಹಾಗೂ ಕಾರ್ಯಕರ್ತರು ಬದ್ಧರಾಗಿರಬೇಕು ಎಂದು ಹೇಳಿದರು.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿ.ಪಿ. ಯೋಗೇಶ್ವರ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ. ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೂ ರ್ಚಚಿಸಿ, ಒಮ್ಮತದ ಅಭ್ಯರ್ಥಿಯನ್ನಾಗಿ ಯೋಗೇಶ್ವರಗೆ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.