

ಮಂಡ್ಯ: ಗೋವುಗಳನ್ನು ಸಾಕುತ್ತಿರುವ ರೈತರು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ ಎಂದು ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸಾತನೂರು ಗ್ರಾಮದಲ್ಲಿ ಕಂಬದ ನರಸಿಂಹಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಆರು ದಿನಗಳ ಕಾಲ ಬ್ರಹ್ಮ ರಥೋತ್ಸವ ಅಂಗವಾಗಿ ನಡೆದ ದನಗಳ ಜಾತ್ರೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಭಾರತದಲ್ಲಿ ಗೋವುಗಳನ್ನು ಆಹಾರವಾಗಿ ಉಪಯೋಗಿಸುವುದು ಕಡಿಮೆ. ಆದರೆ ಗೋವಿನ ಉತ್ಪಗಳನ್ನು ಬಳಸುತ್ತೇವೆ ಎಂದು ಹೇಳಿದರು.
ರೈತರು ದೇಸಿ ತಳಿ ಜಾನುವಾರನ್ನು ಹೆಚ್ಚಾಗಿ ಸಾಕಬೇಕು. ಗೋವುಗಳು ಕೊಡುವ ಹಾಲು, ಗಂಜಲ, ಸಗಣಿಯಿಂದ ನಮ್ಮ ಆರೋಗ್ಯ ಕಾಪಾಡುತ್ತವೆ. ನಾವೂ ಸಹ ಸಾಕಷ್ಟು ಹಸುಗಳನ್ನು ನಮ್ಮ ಗೋಶಾಲೆಯಲ್ಲಿ ಸಾಕಿದ್ದೇವೆ. ಅವುಗಳು ನೀಡುವ ಹಾಲನ್ನು ನಮ್ಮ ವಸತಿ ಶಾಲೆಯಲ್ಲಿರುವ ಒಂದು ಸಾವಿರ ಮಕ್ಕಳಿಗೆ ಹಾಲು, ಕಾಫಿ, ಟೀ, ಮಧ್ಯಾಹ್ನ ಮೊಸರು, ಮಜ್ಜಿಗೆಯನ್ನು ನೀಡುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ನಂದಿನಿ ಹಾಲು ದೆಹಲಿಯಲ್ಲಿ ಮಾರಾಟವಾಗುತ್ತಿರುವುದನ್ನು ಕೇಳಿ ಸಂತೋಷವಾಗಿದೆ. ಇಂತಹ ಗುಣಮಟ್ಟದ ಹಾಲನ್ನು ಉತ್ಪಾದನೆ ಮಾಡುತ್ತಿರುವ ರೈತರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಪಶು ಸಂಗೋಪನಾ ಇಲಾಖೆ ಇಲಾಖೆ ಉಪನಿರ್ದೇಶಕ ಡಾ.ಸುರೇಶ್, ದೇವಸ್ಥಾನ ಟ್ರಸ್ಟ್‌ನ ಮಹೇಶ್, ವೆಂಕಟೇಶ್ ಇತರರಿದ್ದರು.
ವಿಜೇತರಿಗೆ ಬಹುಮಾನ: ಎತ್ತುಗಳ ವಿಭಾಗ(ಹಾಲು ಹಲ್ಲು) ಮೈಸೂರು ಚಿಕ್ಕೇಗೌಡನಕೊಪ್ಪಲು ಮಾದಪ್ಪ(ಪ್ರ), ಹೊಳಲು ಅಭಿನಂದನ್ (ದ್ವಿ), ಹೊಳಲು ಎಚ್.ಬಿ.ದೊಡ್ಡೇಗೌಡ(ತೃ), ಎರಡು ಹಲ್ಲು ವಿಭಾಗ: ಜೀಗುಂಡಿಪಟ್ಟಣ ಸತೀಶ್(ಪ್ರ), ಕಾಳಸಿದ್ದಯ್ಯನಹುಂಡಿ ಮಹೇಂದ್ರ(ದ್ವಿ), ಹೊಸಹಳ್ಳಿ ಶಂಕರಗೌಡ(ತೃ), ನಾಲ್ಕು ಹಲ್ಲು ವಿಭಾಗ: ಕೆನ್ನಾಳು ನಿರಂಜನ್(ಪ್ರ), ಅಂಚೆಮುದ್ದನಹಳ್ಳಿ ಹೇಮಂತ್(ದ್ವಿ), ಸೀಹಳ್ಳಿ ಹೇಮೇಶ್(ತೃ), ಆರು ಹಲ್ಲು ವಿಭಾಗ: ಹೇಮಂತ್(ಪ್ರ), ಜಿ.ಹೊಸಹಳ್ಳಿ ಮಾದಪ್ಪ(ದ್ವಿ), ಕಡತನಾಳು ಹನುಮೇಗೌಡ(ತೃ) ಬಹುಮಾನ ನೀಡಲಾಯಿತು. ಮೊದಲ ಬಹುಮಾನ 15 ಸಾವಿರ ರೂ, ದ್ವಿತೀಯ 10 ಸಾವಿರ ರೂ, ತೃತೀಯ ಬಹುಮಾನ 5 ಸಾವಿರ ರೂ ಹಾಗೂ ಚಾಂಪಿಯನ್ ಬಹುಮಾನವಾಗಿ 20 ಸಾವಿರ ರೂ ಮತ್ತು 2 ಗ್ರಾಂ ಚಿನ್ನ ನೀಡಲಾಯಿತು.