ಅತ್ಯುತ್ತಮ ಗಣೇಶೋತ್ಸವ ಆಚರಿಸುವ ಮೂರು ಸಂಘಕ್ಕೆ ಬಹುಮಾನ

Meeting
Published on

ಗೋಕರ್ಣ: ಗಣೇಶ ಚತುರ್ಥಿ ಮತ್ತು ಈದ್-ಮಿಲಾದ್ ಪ್ರಯುಕ್ತ ಸ್ಥಳೀಯ ಪೊಲೀಸ್ ಇನ್​ಸ್ಪೆಕ್ಟರ್ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಇಲ್ಲಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಸಮುದಾಯ ಭವನದಲ್ಲಿ ಮಂಗಳವಾರ ಶಾಂತಿ ಪಾಲನಾ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಪಿಐ ಶ್ರೀಧರ, ಎರಡೂ ಹಬ್ಬವನ್ನು ಸಂಪೂರ್ಣವಾಗಿ ಶಾಂತಿ ಸುವ್ಯವಸ್ಥೆಗೆ ತೊಂದರೆಯಾಗದಂತೆ ಆಚರಿಸಬೇಕು. ಪ್ರವಾಸಿ ತಾಣವಾದ ಗೋಕರ್ಣದಲ್ಲಿ ಈ ವೇಳೆ ಹೆಚ್ಚಿನ ಪ್ರವಾಸಿಗರು ಮತ್ತು ವಾಹನಗಳ ಓಡಾಟ ಇರುವುದರಿಂದ ಏಕ ಮುಖ ಸಂಚಾರ ವ್ಯವಸ್ಥೆ ಮತ್ತು ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ನೈಸರ್ಗಿಕ ಬಣ್ಣದ ಮೂರ್ತಿ, ಶಾಂತಿ ಸುವ್ಯವಸ್ಥೆ ಪಾಲನೆ, ಸಿಡಿಮದ್ದು ನಿಷೇಧ ಮುಂತಾದ ಪರಿಸರ ಸ್ನೇಹಿಯಾಗಿ ಸರ್ಕಾರಿ ಮಾರ್ಗಸೂಚಿ ಮತ್ತು ಕಾನೂನಿನ ಪ್ರಕಾರ ಗಣೇಶ ಹಬ್ಬವನ್ನು ಉತ್ತಮವಾಗಿ ಸಂಘಟಿಸುವ ಮೂರು ಸಾರ್ವಜನಿಕ ಸಂಘಗಳಿಗೆ ಇಲಾಖೆ ವತಿಯಿಂದ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲು ನಿರ್ಧರಿಸಲಾಗಿದೆ. ಜತೆಗೆ ಸಂಘದಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ ಮೂರು ಕಾರ್ಯಕರ್ತರನ್ನು ಸ್ಥಳೀಯ ಪೊಲೀಸರ ವತಿಯಿಂದ ಪುರಸ್ಕರಿಸಲಾಗುವುದು ಎಂದು ತಿಳಿಸಿದರು.

ಸರ್ಕಾರ ಸಾರ್ವಜನಿಕವಾಗಿ ಡಿಜೆ ಮತ್ತು ಧ್ವನಿವರ್ಧಕ ಬಳಕೆ ನಿರ್ಬಂಧಿಸಿದೆ. ಇದನ್ನು ಎಲ್ಲ ಆಯೋಜಕರು ತಪ್ಪದೆ ಅನುಸರಿಸಬೇಕು. ಸ್ಥಳೀಯ ಗ್ರಾಪಂ ಒಪ್ಪಿಗೆ ಪತ್ರ, ರಾತ್ರಿ ನಿಗದಿತ ಸಮಯದೊಳಗೆ ಕಾರ್ಯಕ್ರಮ ಮುಗಿಸುವುದು ಇತ್ಯಾದಿ ನಿಯಮಗಳು ಎಂದಿನಂತೆ ಜಾರಿಯಲ್ಲಿರಲಿವೆ ಎಂದರು.

ಸಭೆಯಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗಂಗಾವಳಿಯಿಂದ ಬರ್ಗಿವರೆಗಿನ 41 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಪ್ರತಿನಿಧಿಗಳು ಮತ್ತು ಎಲ್ಲ ಮಸೀದಿಗಳ ಸಂಚಾಲಕರು ಇದ್ದರು.

ಉಪತಹಸೀಲ್ದಾರ್ ಟಿ.ಎಸ್. ಗಾಣಿಗೇರ, ಗ್ರಾಪಂ ಅಧ್ಯಕ್ಷರಾದ ಸುಮನಾ ಗೌಡ, ಸಣ್ಣು ಗೌಡ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಗ್ರಾಪಂ ಕಾರ್ಯದರ್ಶಿ ವಿನಾಯಕ ಸಿದ್ದಾಪುರ, ಪಿಎಸ್​ಐ ಖಾದರ್ ಬಾಷಾ, ಪಿಎಸ್​ಐ ಶಶಿಧರ, ಹೆಸ್ಕಾಂ, ಅಗ್ನಿಶಾಮಕ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net