

ಹುಬ್ಬಳ್ಳಿ-: ಇಲ್ಲಿಯ ಐತಿಹಾಸಿಕ ಹಿನ್ನಲೆಯ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ "ಬಸವ ವಿಭೂಷಣ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದೇ ರೀತಿ ಹಿರಿಯ ಚಿಂತಕ ಮೋಹನ ಲಿಂಬಿಕಾಯಿ ಅವರಿಗೆ "ಬಸವ ಭೂಷಣ' ಗೌರವ ನೀಡಲಾಗುತ್ತಿದೆ ಎಂದು ಕಚುಸಾಪ ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ತಿಳಿಸಿದ್ದಾರೆ.
ಜೂನ್ 25ರಂದು ಬೆಳಗ್ಗೆ 8.30ಕ್ಕೆ ಮೂರುಸಾವಿರ ಮಠದ ಡಾ. ಮೂಜಗಂ ಸಭಾಂಗಣದಲ್ಲಿ ಜರುಗಲಿರುವ ವಿಚಾರಗೋಷ್ಠಿ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬಸವೇಶ್ವರರ ಕುರಿತು ಕವಿಗೋಷ್ಠಿ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.
ಬಸವ ತತ್ವ ಸಂದೇಶ ಇಂದು ಪ್ರಸ್ತುತ ಕುರಿತು ರಾಜ್ಯಮಟ್ಟದ ವಿಚಾರಗೋಷ್ಠಿ ನಡೆಯಲಿದ್ದು, ಹಿರಿಯ ಚಿಂತಕರಾದ ಗಣಪತಿ ಭಟ್ಟ ವರ್ಗಾಸರ, ಶಾಲಿನಿ ರುದ್ರಮುನಿ ಮತ್ತು ಸುನಂದಾ ಶ್ಯಾಗೋಟಿ ವಿಚಾರ ಮಂಡಿಸಲಿದ್ದಾರೆ. ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.