

ಮೈಸೂರು: ಯುಗಾದಿ ಹಬ್ಬದ ಅಂಗವಾಗಿ ದುರ್ಗಾ ಫೌಂಡೇಷನ್‌ನಿಂದ ಆಯೋಜಿಸಿದ್ದ ಆನ್‌ಲೈನ್ ರಂಗೋಲಿ ಸ್ಪರ್ಧೆ ವಿಜೇತರಿಗೆ ಬುಧವಾರ ಬಹುಮಾನ ವಿತರಿಸಲಾಯಿತು.
ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜೇತರಾದ ಜೆ.ಪಿ.ನಗರದ ಉಷಾ, ಉದಯಗಿರಿ ಕೋಮಲಾ, ಶ್ರೀರಾಂಪುರ ಅಶ್ವಿನಿ, ಕುಂಬಾರಕೊಪ್ಪಲು ವಿಜಯಲಕ್ಷ್ಮೀ, ಇಟ್ಟಿಗೆಗೂಡು ಗೀತಾ, ಶ್ರೀನಗರ ಅನನ್ಯಾ, ಬೋಗಾದಿ ರೂಪಾ, ಅಗ್ರಹಾರದ ಸೌಮ್ಯಾ ಜೈನ್, ವಿದ್ಯಾರಣ್ಯಪುರಂನ ಸುಶೀಲಾ, ಅಗ್ರಹಾರದ ಸುಜಾತಾ ಅವರಿಗೆ ಬಹುಮಾನ ವಿತರಿಸಲಾಯಿತು.
ಸಮಾಜ ಸೇವಕಿ ಕಾವ್ಯಾ ಮಾತನಾಡಿ, ರಂಗೋಲಿ ನಮ್ಮ ದೇಶದ ಸಂಸ್ಕೃತಿಯ ಪ್ರತೀಕ. ಮಹಿಳೆಯರಿಗೆ ದಿನ ಆರಂಭವಾಗುವುದೆ ರಂಗೋಲಿ ಬಿಡಿಸುವುದರಿಂದ. ಇಂತಹ ಅಪರೂಪದ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಮನೆ ಮಕ್ಕಳಿಗೆ ರಂಗೋಲಿ ಬಿಡಿಸುವುದನ್ನು ಕಲಿಸಬೇಕು ಎಂದು ಹೇಳಿದರು
ವಕೀಲೆ ಬಿ.ಡಿ.ಜ್ಯೋತಿ ಮಾತನಾಡಿ, ರಂಗವಲ್ಲಿ ಮೂಲಕ ವಿಷ್ಣುವನ್ನು ಬರಮಾಡಿಕೊಳ್ಳುವುದೇ ರಂಗೋಲಿಯ ಉದ್ದೇಶ. ಮನೆ ಮುಂದೆ ರಂಗೋಲಿ ಬಿಡಿಸುವುದು ಶುಭ ಸೂಚನೆಯ ಸಂಕೇತ. ರಂಗೋಲಿಯನ್ನು ದಾಟಿಕೊಂಡು ಹೊರಗೆ ಹೋದರೆ ಶುಭ ಎಂಬ ಮಾತಿದೆ ಎಂದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ರಂಗೋಲಿ ಕಲೆಯು ಭಾವನೆ ಸಂಬಂಧವನ್ನು ಬೆಸೆಯುವ ಸಂಕೇತ. ರಂಗೋಲಿ ಹಾಕಲು ಕೋರುವ ಭಂಗಿ, ಬಿಡಿಸುವ ರೀತಿಯಿಂದ ಕೆಲಕಾಲ ದೇಹದ ವ್ಯಾಯಾಮ ಆಗುತ್ತದೆ ಎಂದು ಹೇಳಿದರು.
ಶ್ರೀದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಮುಖಂಡರಾದ ರಂಜಿನಿ, ಶೋಭಾ, ಮುಖ್ಯ ಶಿಕ್ಷಕಿ ಸುಗುಣಾವತಿ, ರಕ್ತದಾನಿ ಮಂಜು, ಮಹಾನ್ ಶ್ರೇಯಸ್, ಶಾರದಾ, ಎಸ್ ಪ್ರಕಾಶ್ ಪ್ರಿಯದರ್ಶನ್ ಇತರರಿದ್ದರು.