

ಮಂಡ್ಯ: ಸಾಧನೆ ಮಾಡಲು ಹಲವು ಅಡೆತಡೆಗಳು ಎದುರಾಗುತ್ತವೆ. ಅದಕ್ಕೆ ಎದೆಗುಂದದೆ ಎಲ್ಲವನ್ನೂ ದಾಟಿ ವಿದ್ಯಾರ್ಥಿಗಳು ಮುನ್ನುಗ್ಗಬೇಕು ಎಂದು ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಮಾಜಿ ಪುರಸಭೆ )ಆವರಣದಲ್ಲಿ ಬದುಕು ಬೆಳಕು ಸೇವಾ ಸಮಿತಿ, ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ, ಅಮೃತ ಅಲಯನ್ಸ್ ಸಂಸ್ಥೆ , ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಹಾಗೂ ವಿಶ್ವ ಮಧುಮೇಹ ದಿನಾಚರಣೆಯಲ್ಲಿ ಮಾತನಾಡಿದರು.
ಉನ್ನತ ಹುದ್ದೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳೇ ಹೆಚ್ಚಿದ್ದಾರೆ. ಸರ್ಕಾರಿ ಶಾಲೆಯ ಬಗ್ಗೆ ತಾತ್ಸಾರ ಬೇಡ. ಅದೇ ರೀತಿ ನೀವು ಕೂಡ ಪರಿಶ್ರಮದಿಂದ ಓದಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ. ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಗುರಿ ಸರಿಯಾಗಿದ್ದರೆ, ಮುಂದಿನ ಹಾದಿ ಸುಗಮವಾಗಿ ಇರುತ್ತದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂದರು.
ವೈದ್ಯ ಡಾ.ಅರುಣ್ ಮಾತನಾಡಿ, ಅತಿಯಾಗಿ ಯಾವುದೇ ಸಿಹಿ ಪದಾರ್ಥಗಳು ಸೇವನೆಗೆ ಯೋಗ್ಯವಲ್ಲ. ತರಕಾರಿ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿ ಮೊಳಕೆ ಕಾಳು ಆರೋಗ್ಯಕ್ಕೆ ಉತ್ತಮ ಎಂದು ಹೇಳಿದರು.
ಮಕ್ಕಳ ಹಕ್ಕುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಶಿಲ್ಪಾ ಉಪನ್ಯಾಸ ನೀಡಿದರು. ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಎಂ.ಎಸ್.ಸುನಿತಾ, ಪ್ರಾಂಶುಪಾಲ ಡಿ.ಗುರುಲಿಂಗೇಗೌಡ, ಅಮೃತ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿ.ಎನ್.ಮಂಜುನಾಥ್, ಸಂಗೀತ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷೆ ಶೋಭಾ ಪಿ.ಗೌಡ ಇದ್ದರು.