

ಎಚ್.ಡಿ.ಕೋಟೆ: ನಮ್ಮ ಕಾಲೇಜಿನ ಬಾಲ್ ಬ್ಯಾಡ್ಮಿಂಟನ್ ಬಾಲಕಿಯರ ತಂಡ ತಾಲೂಕು ಮಟ್ಟದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಎಂಎಂಕೆ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಪಿ.ಪ್ರಕಾಶ್ ತಿಳಿಸಿದರು.
ತಾಲೂಕಿನ ತುಂಬಸೋಗೆ ಗ್ರಾಮದ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇತ್ತೀಚೆಗೆ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ, ಕ್ರೀಡಾರಂಗದಲ್ಲಿಯೂ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿದ್ದಾರೆ. ಅದರಲ್ಲಿಯೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ತಂಡ ಸತತ 3 ಬಾರಿ ತಾಲೂಕು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು, ಕಳೆದ 2 ಬಾರಿಯೂ ಜಿಲ್ಲಾ ಮಟ್ಟದಲ್ಲಿಯೂ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ, ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದರು.
ಈ ಬಾರಿಯೂ ಉತ್ತಮ ಸಾಧನೆ ಮಾಡಿದ್ದು, ಬಾಲಕಿಯರು ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ, ಬಾಲ್ ಬ್ಯಾಡ್ಮಿಂಟನ್ ಬಾಲಕ ಮತ್ತು ಬಾಲಕಿಯರ ತಂಡ ಪ್ರಥಮ, ಬಾಲಕಿಯರ ಕಬಡ್ಡಿ ತಂಡ ದ್ವಿತೀಯ ಸ್ಥಾನ, ಅಥ್ಲೆಟಿಕ್ಸ್‌ನಲ್ಲಿ 3,000 ಮೀಟರ್ ನಲ್ಲಿ ಸಿಂಚನಾ ಪ್ರಥಮ , ಮಾನ್ಯ ತೃತೀಯ ಸ್ಥಾನ, 1,500 ಮೀಟರ್ ಓಟದಲ್ಲಿ ಸಿಂಚನಾ ತೃತೀಯ ಸ್ಥಾನ, 200 ಮೀಟರ್‌ನಲ್ಲಿ ಕೀರ್ತನಾ ತೃತೀಯ ಸ್ಥಾನ, ಗುಂಡು ಎಸೆತ ಐಶ್ವರ್ಯಾ ಪ್ರಥಮ, 1,500 ಮೀ. ಹೇಮಂತ್ ಪ್ರಥಮ, 200 ಮೀ. ಓಟದಲ್ಲಿ ಮಹಮ್ಮದ್ ಯಾಸಿನ್ ತೃತೀಯ ಸ್ಥಾನ, ಜಾವಲಿನ್ ಥ್ರೋನಲ್ಲಿ ಮಹದೇವಸ್ವಾಮಿ ತೃತೀಯ ಸ್ಥಾನ ಹಾಗೂ ಉದ್ದ ಜಿಗಿತದಲ್ಲಿ ವಿನೋದ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಸಂಸ್ಥೆ ಅಧ್ಯಕ್ಷ ಕೆ.ಆರ್ .ಸತೀಶ್, ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಸ್.ಹರೀಶ್ ಕುಮಾರ್, ಉಪನ್ಯಾಸಕರಾದ ಪ್ರಸನ್ನ, ವಿರೂಪಾಕ್ಷ, ಸಿದ್ದಾರ್ಥ, ಸಿದ್ದಾರಾಜು, ಮೋಹನ್, ಮನೋಜ್, ಜಾನ್ ಬೋಸ್ಕೋ, ಕುಮಾರ್ , ಮಹಾದೇವಿ, ಮುಸ್ಕಾನ್, ಸುಪ್ರೀಯಾ, ತನುಜಾ, ನೀಲಮಣಿ, ಸೌಜನ್ಯಾ, ಭಾಗ್ಯಾ, ಸಹಾಯಕ ಅನಿಲ್ ಇತರರು ಇದ್ದರು.